ವಿಶಾಖಪಟ್ಟಣಂ : ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಸತತ ಎರಡು ಗೋಲ್ಡನ್ ಡಕ್ ಭಾರತ ತಂಡಕ್ಕೆ ತಲೆನೋವಾಗಿದೆ ಪರಿಣಮಿಸಿದೆ. ಎರಡೂ ಪಂದ್ಯಗಳಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ದಾಳಿಗೆ ಸಿಲುಕಿರುವ ಸೂರ್ಯಕುಮಾರ್ ರನ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದರು. ನೀರಸ ಪ್ರದರ್ಶನದ ಬಳಿಕ ತಂಡದಲ್ಲಿ ಅವರ ಸ್ಥಾನದ ಕುರಿತಂತೆ ಎದ್ದ ಪ್ರಶ್ನೆಗಳಿಗೆ ನಾಯಕ ರೋಹಿತ್ ಶರ್ಮಾ ಉತ್ತರಿಸಿದ್ದು, ಸೂರ್ಯ ಬೆಂಬಲಕ್ಕೆ ನಿಂತಿದ್ದಾರೆ.
ಎರಡೂ ಪಂದ್ಯಗಳಲ್ಲಿ ತಾವೆದುರಿಸಿದ ಮೊದಲ ಎಸೆತದಲ್ಲೇ ಎಲ್ಬಿಡಬ್ಲೂ ಬಲೆಗೆ ಬಿದ್ದಿರುವ ಸೂರ್ಯಕುಮಾರ್ ಯಾದವ್ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸದ್ಯ ಟಿ20 ಕ್ರಿಕೆಟ್ನಲ್ಲಿ ವಿಶ್ವ ನಂ. 1 ಆಗಿರುವ ಸೂರ್ಯ ದೀರ್ಘ ಮಾದರಿಯ ಆಟದಲ್ಲಿ ವೈಫಲ್ಯ ಕಾಣುತ್ತಿರುವ ಬಗ್ಗೆ ಪ್ರಶ್ನೆಗಳು ಮೂಡಿವೆ. ಇದೇ ವಿಚಾರವಾಗಿ ಪಂದ್ಯದ ನಂತರ ಮಾಧ್ಯಮದವರಿಗೆ ಉತ್ತರಿಸಿರುವ ನಾಯಕ ರೋಹಿತ್, "ಗಾಯಾಳು ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳುವ ಬಗ್ಗೆ ನಮಗೆ ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ಅವರ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಆಡಿಸಲಾಗುತ್ತಿದೆ. ವೈಟ್ ಬಾಲ್ ಕ್ರಿಕೆಟ್ನಲ್ಲಿ ಸೂರ್ಯ ಸಾಕಷ್ಟು ಸಲ ಸಾಮರ್ಥ್ಯ ತೋರಿದ್ದಾರೆ. ನಾನು ಈ ಹಿಂದೆಯೂ ಹಲವು ಬಾರಿ ಇದನ್ನೇ ಹೇಳಿದ್ದೇನೆ. ಸಾಮರ್ಥ್ಯ ಹೊಂದಿರುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು" ಎಂದು ಹೇಳಿದರು.
"ಸಹಜವಾಗಿ, ಸೂರ್ಯಕುಮಾರ್ ದೀರ್ಘ ಸ್ವರೂಪದ ಕ್ರಿಕೆಟ್ನಲ್ಲೂ ಸ್ಥಿರ ಪ್ರದರ್ಶನ ನೀಡಬೇಕಿದೆ. ಈ ವಿಚಾರವು ಸೂರ್ಯಗೂ ಅರಿವಿರುತ್ತದೆ ಎಂದು ನಾನು ಭಾವಿಸುತ್ತೇನೆ. ಸೂರ್ಯ ಎರಡು ಪಂದ್ಯಗಳಲ್ಲಿಯೂ ರನ್ ಗಳಿಸದೆ ಔಟಾಗಿದ್ದಾರೆ. 7-8 ಅಥವಾ 10 ಪಂದ್ಯಗಳಿಗೆ ಹೋಲಿಸಿದಾಗ ಸ್ಥಿರ ಪ್ರದರ್ಶನ ನೀಡುವ ಅಗತ್ಯವಿದೆ. ಸದ್ಯ ಅವರು ಗಾಯಗೊಂಡ ಆಟಗಾರ ಹಾಗೂ ಅಲಭ್ಯತೆ ಹಿನ್ನೆಲೆಯಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದಾರೆ. ಈ ಹಿಂದೆ ನನಗೂ ಸಹ ನಿರ್ದಿಷ್ಟ ಕ್ರಮಾಂಕದಲ್ಲಿ ಸಾಕಷ್ಟು ಅವಕಾಶ ಲಭಿಸಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ" ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದರು.
ಎರಡು ಪಂದ್ಯಗಳಲ್ಲಿನ ವಿಫಲತೆಯ ನಂತರ ಅಂತಿಮ ಮ್ಯಾಚ್ನಲ್ಲೂ ಸೂರ್ಯಕುಮಾರ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಶ್ರೇಯಸ್ ಅಯ್ಯರ್ ಗಾಯದ ಕಾರಣ ಅವರ ಸ್ಥಾನಕ್ಕೆ ಸೂರ್ಯ ಅತ್ಯಗತ್ಯ. ಅಲ್ಲದೆ, ಏಕದಿನ ಕ್ರಿಕೆಟ್ನಲ್ಲಿ ಕೆಲ ಉತ್ತಮ ಪ್ರದರ್ಶನಗಳ ನಡುವೆಯೂ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಆಯ್ಕೆ ಆಗದಿರುವುದು ಸ್ಕೈಗೆ ಮತ್ತೊಂದು ಅವಕಾಶ ನೀಡಲಿದೆ.
ಇದೇ ವೇಳೆ ತಂಡದ ಅಗ್ರಕ್ರಮಾಂಕದ ನೀರಸ ಪ್ರದರ್ಶನದ ಕುರಿತಂತೆ ಪ್ರತಿಕ್ರಿಯಿಸಿದ ರೋಹಿತ್, "ಕೇವಲ ಎರಡು ಪಂದ್ಯಗಳಾಗಿವೆ, ಈ ಹಿಂದಿನ 6 ಪಂದ್ಯಗಳಲ್ಲಿ ಅಗ್ರ ಕ್ರಮಾಂಕವು ಭರ್ಜರಿ ಆಟವಾಡಿದೆ" ಎಂದರು. ಬ್ಯಾಟರ್ಗಳು ಎಡಗೈ ವೇಗದ ಬೌಲರ್ ಎದುರಿಸಲು ಪರದಾಡುತ್ತಿರುವ ಬಗ್ಗೆ ಉತ್ತರಿಸುತ್ತ, "ಎದುರಾಳಿ ತಂಡದಲ್ಲಿ ಗುಣಮಟ್ಟದ ಬೌಲರ್ ಇದ್ದಾಗ ಅವರು ವಿಕೆಟ್ ಪಡೆಯವುದು ಸಹಜ. ತಂಡದಲ್ಲಿ ಅತ್ಯುತ್ತಮ ಬ್ಯಾಟರ್‌ಗಳ ವಿಕೆಟ್ ಪಡೆಯಲು ಅವರು ತಕ್ಕ ಪ್ರದರ್ಶನ ತೋರುತ್ತಾರೆ. ಇದರಲ್ಲಿ ಎಡಗೈ ಆಟಗಾರ ಅಥವಾ ಬಲಗೈ ಆಟಗಾರ ಎಂಬುದಿಲ್ಲ. ಬಲಗೈ ಬೌಲರ್ಗಳೂ ಸಹ ನಮಗೆ ಕಾಟ ಕೊಟ್ಟಿದ್ದಾರೆ. ಆದರೆ ಯಾರೂ ಸಹ ಈ ಬಗ್ಗೆ ಮಾತನಾಡುವುದಿಲ್ಲ. ಹೀಗಾಗಿ, ನಾವು ಎಡಗೈ ಅಥವಾ ಬಲಗೈ ಎಂಬುದಕ್ಕೆ ಹೆಚ್ಚು ಗಮನ ಕೊಡುವುದಿಲ್ಲ. ಆರಂಭದಲ್ಲೇ ಹೆಚ್ಚಿನ ವಿಕೆಟ್ ಕಳೆದುಕೊಳ್ಳುವುದು ಆತಂಕಕಾರಿ. ಈ ಎಲ್ಲ ಸಂಗತಿಗಳನ್ನು ಪರಿಶೀಲಿಸಿ, ವೈಫಲ್ಯದಿಂದ ಹೊರಬರಲು ಸಿದ್ಧರಾಗಬೇಕಿದೆ" ಎಂದರು.
ಮಾರ್ಚ್ 22ರಂದು ಚೆನ್ನೈನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಿರ್ಣಾಯಕ ಪಂದ್ಯವು ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಋತುವಿನ ಆರಂಭಕ್ಕೂ ಮುನ್ನ ಭಾರತಕ್ಕೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಏಕದಿನ ಟ್ರೋಫಿ ಪಡೆದುಕೊಳ್ಳಲಿದೆ.