ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ಪಡೆ ಮೇಲೆ ಕೀವಿಸ್ ತಂಡ ಮೊದಲ ದಿನ ಸವಾರಿ ಮಾಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡ ದಿನದಂತ್ಯಕ್ಕೆ 7 ವಿಕೆಟ್‌ಗೆ 258 ರನ್ ಗಳಿಸಿದೆ. ಡೇನ್ ಲಾರೆನ್ಸ್ (67*) ಜತೆಗೆ ಮಾರ್ಕ್ ವುಡ್ (16*) ಕ್ರೀಸ್‌ನಲ್ಲಿದ್ದಾರೆ. ಡೊಮ್ ಸಿಬ್ಲೆ (35) ಜತೆಗೆ ಬರ್ನ್ಸ್ ಮೊದಲ ವಿಕೆಟ್‌ಗೆ 72 ರನ್ ಸೇರಿಸಿದ ಬಳಿಕ ಇಂಗ್ಲೆಂಡ್ ಕುಸಿತ ಕಂಡಿತು. ಜಾಕ್ ಕ್ರೌಲಿ (0), ನಾಯಕ ಜೋ ರೂಟ್ (4) ಮತ್ತು ಒಲಿ ಪೋಪ್ (19) ರನ್ ಗಳಿಸಿ ವೈಫಲ್ಯ ಕಂಡರು.
ಆರಂಭಿಕ ರೋರಿ ಬರ್ನ್ಸ್ (81 ರನ್, 187 ಎಸೆತ, 10 ಬೌಂಡರಿ) ಮತ್ತು ಡೇನ್ ಲಾರೆನ್ಸ್ (67*ರನ್, 100 ಎಸೆತ, 11 ಬೌಂಡರಿ) ಪ್ರವಾಸಿ ನ್ಯೂಜಿಲೆಂಡ್ ತಂಡದ ಬೌಲರ್‌ಗಳ ದಾಳಿಗೆ ಕುಸಿದ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದಾರೆ.
ಆಂಡರ್‌ಸನ್ ದಾಖಲೆ: ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್‌ಸನ್ 162ನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಮೂಲಕ ಇಂಗ್ಲೆಂಡ್ ಪರ ಗರಿಷ್ಠ ಟೆಸ್ಟ್ ಪಂದ್ಯ ಆಡಿದ ಮಾಜಿ ನಾಯಕ ಅಲಸ್ಟೇರ್ ಕುಕ್(161) ದಾಖಲೆ ಮುರಿದರು. ಮೊದಲ ದಿನದಾಟಕ್ಕೆ 17 ಸಾವಿರ ಪ್ರೇಕ್ಷಕರು ಹಾಜರಾದರು.
6 ಬದಲಾವಣೆಯೊಂದಿಗೆ ಕಣಕ್ಕಿಳಿದ ನ್ಯೂಜಿಲೆಂಡ್:
ಭಾರತದೆದುರಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿ ಕಾದಾಟಕ್ಕೆ ಮುನ್ನ ಗಾಯದ ಸಮಸ್ಯೆ ಮತ್ತು ವಿಶ್ರಾಂತಿ ನೀಡುವ ಸಲುವಾಗಿ ನ್ಯೂಜಿಲೆಂಡ್ ಮೊದಲ ಟೆಸ್ಟ್‌ನಲ್ಲಿ ಆಡಿದ ತಂಡದಲ್ಲಿ 6 ಬದಲಾವಣೆ ಮಾಡಿಕೊಂಡಿದೆ. ನಾಯಕ ಕೇನ್ ವಿಲಿಯಮ್ಸನ್ ಜತೆಗೆ ವಿಕೆಟ್ ಕೀಪರ್ ಬಿಜೆ ವಾಟ್ಲಿಂಗ್ ಕೂಡ ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದರು.
ಅವರ ಬದಲು ವಿಲ್ ಯಂಗ್ ಮತ್ತು ಟಾಮ್ ಬ್ಲಂಡೆಲ್ ಕಣಕ್ಕಿಳಿದರು. ಟಿಮ್ ಸೌಥಿ, ಕೈಲ್ ಜೇಮಿಸನ್, ಮಿಚೆಲ್ ಸ್ಯಾಂಟ್ನರ್ ಮತ್ತು ಕಾಲಿನ್ ಡಿ ಗ್ರಾಂಡ್‌ಹೋಮ್ ಬದಲಿಗೆ ಟ್ರೆಂಟ್ ಬೌಲ್ಟ್, ಡೆರಿಲ್ ಮಿಚೆಲ್, ಮ್ಯಾಟ್ ಹ್ಯಾರಿ ಮತ್ತು ಅಜಾಜ್ ಪಟೇಲ್ ಕಣಕ್ಕಿಳಿದಿದ್ದಾರೆ.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 90 ಓವರ್‌ಗಳಲ್ಲಿ 7 ವಿಕೆಟ್‌ಗೆ 258 (ಬರ್ನ್ಸ್ 81, ಸಿಬ್ಲೆ 35, ರೂಟ್ 4, ಪೋಪ್ 19, ಲಾರೆನ್ಸ್ 67*, ಸ್ಟೋನ್ 20, ವುಡ್ 16*, ಬೌಲ್ಟ್ 60/ 2, ಮ್ಯಾಟ್ ಹೆನ್ರಿ 66/ 2, ವ್ಯಾಗ್ನರ್ 2/1, ಅಜಾಜ್ 34/ 2).