ದುಬೈ: ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ವಿಶ್ವದ ಶ್ರೇಷ್ಠ ಟಿ20 ಬೌಲರ್ ಆಗಿದ್ದಾರೆ. ಅವರೊಂದಿಗೆ ಶಾಹೀನ್ ಅಫ್ರಿದಿಯನ್ನು ಹೋಲಿಕೆ ಮಾಡುವುದು ಮೂರ್ಖತನ ಎಂದು ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳು ಶುಕ್ರವಾರ ಮುಗಿದಿವೆ. ಇಂದಿನಿಂದ ಐಸಿಸಿ ಟಿ20 ವಿಶ್ವಕಪ್ನ ಸೂಪರ್ 12 ಪಂದ್ಯಗಳು ಆರಂಭವಾಗಲಿದೆ. ಭಾನುವಾರ ಕ್ರಿಕೆಟ್ ಜಗತ್ತು ಎದುರು ನೋಡುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಈ ಪಂದ್ಯ ವಾರವಿರುವಾಗಲೇ, ಗೆಲುವು, ಸೋಲು, ಹೋಲಿಕೆ ಮಾಡುವ ಮೂಲಕ ವಿಶ್ಲೇಷಣೆಗಳು ಆರಂಭವಾಗಿವೆ. ಆದರೆ ಹೋಲಿಕೆ ಮಾಡುವ ಭರದಲ್ಲಿ ಬುಮ್ರಾಗೆ ಅಫ್ರಿದಿ ಹೋಲಿಸುವುದು ಸರಿಯಲ್ಲ ಎಂದು ಅಮೀರ್ ಖಾಸಗಿ ಅನ್ಕಟ್ ಯೂಟ್ಯೂಬ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಶಾಹೀನ್ ಅಫ್ರಿದಿ ಪಾಕಿಸ್ತಾನದ ಬೆಸ್ಟ್ ಬೌಲರ್, ಆದರೆ ಬುಮ್ರಾ ಜೊತೆಗಿನ ಹೋಲಿಕೆ ಮೂರ್ಖತನ. ಏಕೆಂದರೆ ಶಾಹೀನ್ ಇನ್ನೂ ಯುವಕ, ಅವನು ಕಲಿಯುತ್ತಿದ್ದಾನೆ. ಬುಮ್ರಾ ಕೆಲವು ಸಮಯಗಳಿಂದ ಭಾರತಕ್ಕೆ ಒಳ್ಳೆಯದನ್ನು ಮಾಡುತ್ತಿದ್ದಾರೆ ಮತ್ತು ಉತ್ತಮವಾಗಿ ಆಡುತ್ತಿದ್ದಾರೆ. ಅವರು ವಿಶ್ವದ ಅತ್ಯುತ್ತಮ ಟಿ20 ಬೌಲರ್, ಅದರಲ್ಲೂ ಡೆತ್ ಓವರ್ಗಳಲ್ಲಿ ತುಂಬಾ ಚೆನ್ನಾಗಿ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅಮೀರ್ ಹೇಳಿದ್ದಾರೆ.
ಶಾಹೀನ್ ಈ ಸಮಯದಲ್ಲಿ ಪಾಕಿಸ್ತಾನದ ಉತ್ತಮ ಬೌಲರ್ ಆಗಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಅವರ ಪ್ರದರ್ಶನ ಉತ್ತಮವಾಗಿದೆ. ಬುಮ್ರಾ ಹೊಸ ಚೆಂಡಿನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಾರೆ. ಯುವ ಬೌಲರ್ಗಳಲ್ಲಿ ನೋಡುವುದಾದರೆ ಶಾಹೀನ್ ಶ್ರೇಷ್ಠ ಬೌಲರ್ ಎಂದು ಪಾಕಿಸ್ತಾನದ ಮಾಜಿ ಬೌಲರ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬುಮ್ರಾ 26 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಆಸ್ಟ್ರೇಲಿಯಾ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡಿರಲಿಲ್ಲ. ಶಾಹೀನ್ ಅಫ್ರಿದಿ ವಿಂಡೀಸ್ ವಿರುದ್ಧ 4 ಓವರ್ಗಳಲ್ಲಿ 41 ರನ್ ದಕ್ಷಿಣ ಆಫ್ರಿಕಾ ವಿರುದ್ಧ 30 ರನ್ ನೀಡಿ ತಲಾ 2 ವಿಕೆಟ್ ಪಡೆದಿದ್ದರು.
ಇದನ್ನೂ ಓದಿ: ಕೊಹ್ಲಿ, ರೋಹಿತ್ ಅಲ್ಲ, ಈ ಆಟಗಾರ ಭಾರತದ ಮ್ಯಾಚ್ ವಿನ್ನರ್ : ವಾಸಿಂ ಅಕ್ರಮ್