ಗಾಯಗೊಂಡು ಟಿ20 ವಿಶ್ವಕಪ್ನಿಂದ ಹೊರಬಿದ್ದಿರುವ ಜಸ್ಪ್ರೀತ್ ಬೂಮ್ರಾ ಸ್ಥಾನಕ್ಕೆ ಬದಲಿ ಆಟಗಾರನ ಘೋಷಣೆಗೆ ಇಂದೇ ಕೊನೆಯ ದಿನವಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂದು ಆ ಆಟಗಾರನ ಹೆಸರು ಘೋಷಿಸಲಿದೆ. ಹಿರಿಯ ವೇಗಿ ಮೊಹಮದ್ ಶಮಿ ಆಸ್ಟ್ರೇಲಿಯಾ ಟಿಕೆಟ್ ಪಡೆಯುವ ಸಾಧ್ಯತೆ ಹೆಚ್ಚಿದೆ.
ಅಕ್ಟೋಬರ್ 16 ರಿಂದ ಟಿ20 ವಿಶ್ವಕಪ್ ಪಂದ್ಯಗಳು ಪ್ರಾರಂಭವಾಗಲಿದ್ದು, ತಂಡದಲ್ಲಿ ಯಾವುದೇ ಬದಲಾವಣೆ ಮಾಡಲು ಇಂದು ಕೊನೆಯ ದಿನವಾಗಿದೆ. ಹೀಗಾಗಿ ತಂಡಗಳು ಅಂತಿಮ ಬದಲಾವಣೆ ಮಾಡಿಕೊಳ್ಳಲಿವೆ. ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಜಸ್ಪ್ರೀತ್ ಬೂಮ್ರಾ ದಕ್ಷಿಣ ಆಫ್ರಿಕಾ ಸಿರೀಸ್ ವೇಳೆ ಬೆನ್ನುಮೂಳೆ ಮುರಿತಕ್ಕೀಡಾಗಿ ತಂಡದಿಂದ ಹೊರಬಿದ್ದಿದ್ದಾರೆ.
15 ನೇ ಆಟಗಾರನ ಘೋಷಣೆ ಇಲ್ಲದೇ ಭಾರತ ತಂಡ 14 ಸದಸ್ಯರ ಜೊತೆ ಈಗಾಗಲೇ ಆಸ್ಟ್ರೇಲಿಯಾ ತಲುಪಿದೆ. ಪರ್ತ್‌ನಲ್ಲಿ ಸ್ಥಳೀಯ ತಂಡದೊಂದಿಗೆ ಅಭ್ಯಾಸ ಆರಂಭಿಸಿದೆ.
ಸಿರಾಜ್ಗೂ ಇದೆ ಚಾನ್ಸ್: ಮೀಸಲು ತಂಡದಲ್ಲಿದ್ದ ಹಿರಿಯ ವೇಗಿ ಮೊಹಮ್ಮದ್ ಶಮಿ, ಬೂಮ್ರಾ ಬದಲಿಯಾಗಿ ತಂಡ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮೊಹಮದ್ ಸಿರಾಜ್, ದೀಪಕ್ ಚಹರ್ ಕೂಡ ಮೀಸಲು ಆಟಗಾರರಾಗಿದ್ದರು. ಅದರಲ್ಲಿ ದೀಪಕ್ ಚಹರ್ ಕೂಡ ಗಾಯಗೊಂಡಿದ್ದಾರೆ. ಹೀಗಾಗಿ ಸಿರಾಜ್ಗಿಂತಲೂ ಶಮಿಗೆ ಅವಕಾಶ ಹೆಚ್ಚಿದೆ.
ಮೊಹಮದ್ ಸಿರಾಜ್ ಇತ್ತೀಚೆಗಿನ ಪ್ರದರ್ಶನ ಉತ್ತಮವಾಗಿಲ್ಲದಿದ್ದರೂ, ಆಸ್ಟ್ರೇಲಿಯಾ ನೆಲದಲ್ಲಿ ವೇಗಿ ಉತ್ತಮ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾ ವೇಗಿಗಳ ಪಿಚ್ ಆದ ಕಾರಣ ಹೊಸ ಚೆಂಡನ್ನು ಹಂಚಿಕೊಳ್ಳಲು ಸಿರಾಜ್ ಸ್ಥಾನ ಸಿಕ್ಕೂ ಅಚ್ಚರಿಯಿಲ್ಲ.
ಓದಿ: ಹಾರ್ದಿಕ್ ಪಾಂಡ್ಯಾ ರೀತಿ ಆಟಗಾರರು ಹಲವು ವರ್ಷಕ್ಕೊಮ್ಮೆ ಬರ್ತಾರೆ: ಕೀರನ್ ಪೊಲಾರ್ಡ್