ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಶನಿವಾರ ವಿಶೇಷ ಸಾಮಾನ್ಯ ಸಭೆ ನಡೆಸಿದ್ದು, ಇದರಲ್ಲಿ ಐಪಿಎಲ್ ಪುನಾರಂಭ ಮತ್ತು ಟಿ-20 ವಿಶ್ವಕಪ್ ಆಯೋಜನಯನ್ನು ಪ್ರಮುಖ ಅಜೆಂಡಾಗಳಾಗಿ ಚರ್ಚಿಸಿದೆ.
ಇದರ ಪ್ರಕಾರ ಐಪಿಎಲ್ ಪುನಾರಂಭಕ್ಕೆ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆತಿದೆ. ಇನ್ನು ವಿಶ್ವಕಪ್ ಆಯೋಜನೆ ಬಗ್ಗೆ ಅಂತಿಮ ನಿರ್ಧಾರಕ್ಕೆ ಒಂದು ತಿಂಗಳ ಸಮಯಾವಕಾಶ ಕೇಳಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಆದರೆ, ಸೆಪ್ಟೆಂಬರ್ನಲ್ಲಿ ಐಪಿಎಲ್ ಪುನಾರಂಭ ಮಾಡುವುದರಿಂದ ಕೆಲವು ವಿದೇಶಿ ಕ್ರಿಕೆಟಿಗರು ಅಲಭ್ಯರಾಗುವ ಸಾಧ್ಯತೆಯಿದೆ. ಹಾಗಾಗಿ ಬಿಸಿಸಿಐ ವಿವಿಧ ಬೋರ್ಡ್ಗಳ ಜೊತೆ ಮಾತನಾಡಿ ತಮ್ಮ ಆಟಗಾರರ ಲಭ್ಯತೆ ಬಗ್ಗೆ ಸ್ಪಷ್ಟನೆ ಕೇಳಲು ಬಯಸಿದೆ. ಆದರೆ, ಯಾವುದೇ ವಿದೇಶಿ ಆಟಗಾರರ ಅಲಭ್ಯತೆ ಟೂರ್ನಿಯನ್ನು ನಿಲ್ಲಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುಎಇ ಕ್ರಿಕೆಟ್ ಮಂಡಳಿ ಜೊತೆ ಮಾತನಾಡಿದ್ದೇವೆ. ಅವರು ಉಳಿದ ಐಪಿಎಲ್ ಪಂದ್ಯಗಳನ್ನು ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಆಯೋಜನೆ ಮಾಡುವುದಕ್ಕೆ ಹರ್ಷವ್ಯಕ್ತಪಡಿಸಿದ್ದಾರೆ. ಬಿಸಿಸಿಐ ವಿದೇಶಿ ಆಟಗಾರರ ಲಭ್ಯತೆ ಬಗ್ಗೆ ವಿದೇಶಿ ಕ್ರಿಕೆಟ್ ಮಂಡಳಿಗಳ ಜೊತೆಗೆ ಮಾತನಾಡಲಿದೆ. ಟೂರ್ನಿಗೆ ಆಸ್ಟ್ರೇಲಿಯಾ ಕ್ರಿಕೆಟಿಗರು ಲಭ್ಯರಾಗಲಿದ್ದಾರೆ. ಆದರೆ, ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಆಟಗಾರರ ಭಾಗವಹಿಸುವಿಕೆಯಲ್ಲಿ ಕೆಲವು ಪ್ರಶ್ನೆಗಳಿವೆ. ಏನಾಗುತ್ತದೆ ಎಂದು ನಾವು ಕಾದು ನೋಡಬೇಕಿದೆ. ಇದು 25 ದಿನಗಳ ಯೋಜನೆ ಎಂದು ಮೂಲ ಎಎನ್ಐಗೆ ತಿಳಿಸಿದೆ.
ಪ್ರಸ್ತುತ ಐಸಿಸಿ ವೇಳಾಪಟ್ಟಿಯ ಪ್ರಕಾರ ಸೆಪ್ಟೆಂಬರ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ಹೊರತು ಪಡಿಸಿದರೆ ಯಾವುದೇ ಅಂತಾರಾಷ್ಟ್ರೀಯ ಸರಣಿಯಿಲ್ಲ. ಆದರೆ, ಇಂಗ್ಲೆಂಡ್ ತಂಡ ಬಾಂಗ್ಲಾದೇಶ ಸರಣಿ ಕೈಗೊಳ್ಳಲಿದೆ. ವಿಶ್ವಕಪ್ ದೃಷ್ಟಿಯಿಂದ ಕೆಲವು ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲು ಬಯಸಿದೆ. ಹಾಗಾಗಿ ಬಟ್ಲರ್, ಸ್ಟೋಕ್ಸ್, ಬೈರ್ಸ್ಟೋವ್ ಸೇರಿದಂತೆ ಕೆಲವು ಸ್ಟಾರ್ ಆಟಗಾರರ ಅಲಭ್ಯತೆಯಲ್ಲಿ ಐಪಿಎಲ್ ನಡೆಯುವ ಸಾಧ್ಯತೆಯಿದೆ.
ಇದನ್ನು ಓದಿ:ಐಸಿಸಿ ಬಳಿ ಟಿ20 ವಿಶ್ವಕಪ್ ಕುರಿತ ಅಂತಿಮ ನಿರ್ಧಾರಕ್ಕೆ 1 ತಿಂಗಳ ಸಮಯ ಕೇಳಲು ಬಿಸಿಸಿಐ ನಿರ್ಧಾರ