ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಅಧ್ಯಕ್ಷ ರೋಜರ್ ಬಿನ್ನಿ ಅವರಿಗೆ ಹಿತಾಸಕ್ತಿ ಸಂಘರ್ಷದ ನೋಟಿಸ್ ಜಾರಿ ಮಾಡಲಾಗಿದೆ. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಸೊಸೆ ಮಯಾಂತಿ ಲ್ಯಾಂಗರ್ ಕೆಲಸ ಮಾಡುತ್ತಿರುವುದರಿಂದ ಬಿನ್ನಿ ಹಿತಾಸಕ್ತಿ ಸಂಘರ್ಷವನ್ನು ಹೊಂದಿದ್ದಾರೆ ಎಂದು ದೂರಲಾಗಿದೆ.
ಬಿಸಿಸಿಐನ ಎಥಿಕ್ಸ್ ಅಧಿಕಾರಿ ವಿನೀತ್ ಸರನ್ ಅವರು ಅಧ್ಯಕ್ಷ ರೋಜರ್ ಬಿನ್ನಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಭಾರತೀಯ ಕ್ರಿಕೆಟ್‌ನ ದೇಶೀಯ ಆವೃತ್ತಿಯ ಮಾಧ್ಯಮ ಹಕ್ಕುಗಳನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಯಾಂತಿ ಲ್ಯಾಂಗರ್ ಕೆಲಸ ಮಾಡುತ್ತಿದ್ದು, ಬಿನ್ನಿ ಹಿತಾಸಕ್ತಿ ಸಂಘರ್ಷವನ್ನು ಹೊಂದಿದ್ದಾರೆ ಎಂದು ದೂರುದಾರ ಸಂಜೀವ್ ಗುಪ್ತಾ ಆರೋಪಿಸಿದ್ದಾರೆ.
ಈ ಆರೋಪದ ಮೇಲೆ ರೋಜರ್ ಬಿನ್ನಿ ಅವರಿಗೆ ನೋಟಿಸ್ ಜಾರಿ ನೀಡಲಾಗಿದ್ದು, ಡಿಸೆಂಬರ್ 20ರೊಳಗೆ ಲಿಖಿತ ಉತ್ತರವನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ನವೆಂಬರ್ 21 ರಂದು ನೀಡಲಾದ ಈ ನೋಟಿಸ್‌ನಲ್ಲಿ 'ನಿಮ್ಮ ವಿರುದ್ಧ ಹಿತಾಸಕ್ತಿ ಸಂಘರ್ಷ ಉಲ್ಲಂಘನೆ ಆರೋಪ ಸಂಬಂಧ ಬಿಸಿಸಿಐನ ನಿಯಮ 38 (1) (ಎ) ಮತ್ತು ನಿಯಮ 38 (2)ರಡಿ ದೂರು ಸ್ವೀಕರಿಸಲಾಗಿದೆ. ಅಂತೆಯೇ, ಡಿಸೆಂಬರ್ 20ರಂದು ಅಥವಾ ಅದಕ್ಕೂ ಮೊದಲು ಲಿಖಿತ ಪ್ರತಿಕ್ರಿಯೆಯನ್ನು ನೀಡಲು ನಿರ್ದೇಶಿಸಲಾಗಿದೆ ಎಂದು ವಿನೀತ್ ಸರನ್ ತಮ್ಮ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ ನ್ಯೂಜಿಲ್ಯಾಂಡ್ ಸರಣಿಯಲ್ಲಿ ಮಳೆಯದ್ದೇ ಮೇಲುಗೈ.. ಟಿ20 ಭಾರತಕ್ಕೆ, ಏಕದಿನ ಕಿವೀಸ್ ಪಾಲು