ಮ್ಯಾಂಚೆಸ್ಟರ್: ನಾಳೆಯಿಂದ ಭಾರತ-ಇಂಗ್ಲೆಂಡ್ ತಂಡಗಳ ನಡುವೆ 5ನೇ ಟೆಸ್ಟ್ ಪಂದ್ಯ ಆರಂಭಗೊಳ್ಳಬೇಕಾಗಿದ್ದು, ಇದಕ್ಕೂ ಮುನ್ನಾದಿನವಾದ ಇಂದು ತಂಡದ ಮತ್ತೋರ್ವ ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಹೀಗಾಗಿ ಮ್ಯಾಂಚೆಸ್ಟರ್ ಪಂದ್ಯ ನಡೆಯುವ ಬಗ್ಗೆ ಇದೀಗ ಅನುಮಾನ ಮೂಡಿದೆ.
ತಂಡದ ಸಹ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಎಲ್ಲ ಆಟಗಾರರನ್ನೂ ಹೋಟೆಲ್ ರೂಂನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದೀಗ ಅವರನ್ನು ಪರೀಕ್ಷೆಗೂ ಒಳಪಡಿಸಲಾಗಿದೆ. ಇದೇ ವಿಚಾರವಾಗಿ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದು, ಉಭಯ ತಂಡಗಳ ನಡುವಿನ ಐದನೇ ಟೆಸ್ಟ್ ಪಂದ್ಯ ನಡೆಯುತ್ತೋ, ಇಲ್ವೋ ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮತ್ತೋರ್ವ ಸಿಬ್ಬಂದಿಗೆ ಕೋವಿಡ್: ಮ್ಯಾಂಚೆಸ್ಟರ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಟೆನ್ಶನ್
ಕೋಲ್ಕತ್ತಾದಲ್ಲಿ ನಡೆದ 'ಮಿಷನ್ ಡಾಮಿನೇಷನ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಎಲ್ಲ ಆಟಗಾರರಿಗೆ ಮಾಡಿಸಲಾಗಿರುವ ಆರ್ಟಿ-ಪಿಸಿಆರ್ ಪರೀಕ್ಷಾ ವರದಿ ಬರಬೇಕಾಗಿದ್ದು, ಅದಕ್ಕೋಸ್ಕರ ಕಾಯುತ್ತಿದ್ದೇವೆ ಎಂದು ತಿಳಿಸಿದರು.
ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಹಾಗೂ ಫಿಸಿಯೋ ನಿತಿನ್ ಪಟೇಲ್ ಅವರಿಗೆ ಕೊರೊನಾ ದೃಢಗೊಂಡಿದ್ದು, 10 ದಿನಗಳ ಕಾಲ ಐಸೋಲೇಷನ್ ಮಾಡಲಾಗಿದೆ. ಒಂದು ವೇಳೆ ಇದೀಗ ತಂಡದ ಕೆಲ ಆಟಗಾರರಲ್ಲೂ ಸೋಂಕು ದೃಢಗೊಂಡರೆ ಪಂದ್ಯ ಮೊಟಕುಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.