ನವದೆಹಲಿ : ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡದಿರೋದಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಕಿಡಿಕಾರಿದ್ದ ವಿಕೆಟ್ ಕೀಪರ್ ಕಮ್ ಬ್ಯಾಟರ್ ವೃದ್ಧಿಮಾನ್ ಮೇಲೆ ಬಿಸಿಸಿಐ ಕಠಿಣ ಕ್ರಮಕೈಗೊಳ್ಳುವ ಸಾಧ್ಯತೆಯಿದೆ. ಸೌರವ್ ಗಂಗೂಲಿ ಮತ್ತು ದ್ರಾವಿಡ್ ವಿರುದ್ಧ ಆರೋಪಿಸಿದ್ದರ ಹಿನ್ನೆಲೆ ವೃದ್ಧಿಮಾನ್ ಸಹಾ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದು ಬಂದಿದೆ.
ಭಾರತೀಯ ಕ್ರಿಕೆಟ್ ಮಂಡಳಿ ಕೇಂದ್ರೀಯ ಒಪ್ಪಂದದ ಆಟಗಾರನಾಗಿರುವ ವೃದ್ಧಿಮಾನ್, ಇದೀಗ ನಿಯಮ ಉಲ್ಲಂಘನೆ ಮಾಡಿದ್ದು, ಇದೇ ಕಾರಣಕ್ಕಾಗಿ ಅವರಿಗೆ ನೋಟಿಸ್ ಜಾರಿ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ. ಅವರಿಂದ ಸ್ಪಷ್ಟನೆ ಕೇಳುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಸೌರವ್ ಗಂಗೂಲಿ ಅವರು ವೃದ್ಧಿಮಾನ್ ಸಹಾಗೆ ಕಳುಹಿಸಿದ್ದ ಸಂದೇಶ ಹಾಗೂ ರಾಹುಲ್ ದ್ರಾವಿಡ್ ಜೊತೆಗೆ ನಡೆದ ಸಂಭಾಷಣೆಯನ್ನ ವಿಕೆಟ್ ಕೀಪರ್ ಬ್ಯಾಟರ್ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದು, ಈ ಮೂಲಕ ಕೇಂದ್ರದ ಒಪ್ಪಂದ ಷರತ್ತು 6.3 ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ.
ಬಿಸಿಸಿಐ ಒಪ್ಪಂದದ ಪ್ರಕಾರ ಬಿ ಗುಂಪಿನಲ್ಲಿರುವ ವೃದ್ಧಿಮಾನ್ ಸಹಾ ವಾರ್ಷಿಕವಾಗಿ 3 ಕೋಟಿ ರೂ. ಪಡೆದುಕೊಳ್ಳುತ್ತಿದ್ದಾರೆ. ಬಿಸಿಸಿಐ ನಿಯಮದ ಪ್ರಕಾರ ಅವರು, ಆಯ್ಕೆ ಸಮಿತಿ, ಕೋಚ್, ಆಯ್ಕೆ ವಿಚಾರವಾಗಿ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಳ್ಳುವಂತಿಲ್ಲ. ಆದರೆ, ವೃದ್ಧಿಮಾನ್ ಸಹಾ ಈಗಾಗಲೇ ಈ ನಿಯಮ ಉಲ್ಲಂಘನೆ ಮಾಡಿದ್ದು, ಅವರಿಗೆ ನೋಟಿಸ್ ಜಾರಿಯಾಗುವ ಸಾಧ್ಯತೆಗಳು ದಟ್ಟವಾಗಿವೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ತಮ್ಮ ಆಯ್ಕೆಗೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ, ಬಿಸಿಸಿಐ ಅಧ್ಯಕ್ಷ ಗಂಗೂಲಿ ಅವರೊಂದಿಗೆ ನಡೆಸಿರುವ ವೈಯಕ್ತಿಕ ಸಂಭಾಷಣೆಯನ್ನ ವೃದ್ಧಿಮಾನ್ ಬಹಿರಂಗಪಡಿಸಿದ್ದರು. ಈ ಮೂಲಕ ಬಿಸಿಸಿಐನ 6.3 ನಿಯಮ ಉಲ್ಲಂಘನೆ ಮಾಡಿದ್ದಾರೆ. ಬಿಸಿಸಿಐ ಗುತ್ತಿಗೆಯಲ್ಲಿರುವ ಆಟಗಾರ ಆಯ್ಕೆ ವಿಷಯದ ಬಗ್ಗೆ ಮಾತನಾಡಿರುವ ಬಗ್ಗೆ ಇದೀಗ ಸ್ಪಷ್ಟನೆ ಕೇಳುವ ಸಾಧ್ಯತೆಗಳಿವೆ. ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಟೀಂ ಇಂಡಿಯಾ ಪರ ಈವರೆಗೆ 40 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.
ವೃದ್ಧಿಮಾನ್ ಸಹಾ ಹೇಳಿಕೆ ವಿಚಾರವಾಗಿ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹಾಗೂ ಗಂಗೂಲಿ ಈವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಗಮನಾರ್ಹ ವಿಚಾರವಾಗಿದೆ.