ಹೈದರಾಬಾದ್: ಐದು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿ ಮುಂಚಿತವಾಗಿ ನಡೆಸುವಂತೆ ಇಂಗ್ಲೆಂಡ್ ಕ್ರಿಕೆಟ್ ಸಮಿತಿ ಬಳಿ ಬಿಸಿಸಿಐ ಮನವಿ ಮಾಡಿಕೊಂಡಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಇದಕ್ಕೆ ಸ್ಪಷ್ಟೀಕರಣ ನೀಡಿರುವ ಇಸಿಬಿ, ನಮಗೆ ಆ ರೀತಿಯ ಯಾವುದೇ ಕೋರಿಕೆ ಬಂದಿಲ್ಲ ಎಂದು ತಿಳಿಸಿದೆ.
ಅರ್ಧಕ್ಕೆ ರದ್ದುಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸಲು ಸಹಾಯವಾಗುವಂತೆ ಭಾರತೀಯ ಕ್ರಿಕೆಟ್ ಮಂಡಳಿ ಈ ಕೋರಿಕೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಆದರೆ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಈ ಮಾಹಿತಿ ತಳ್ಳಿ ಹಾಕಿದೆ.
ಇದನ್ನೂ ಓದಿ: ಟೆಸ್ಟ್ ಸರಣಿಯನ್ನು ಒಂದು ವಾರ ಮುಂಚಿತವಾಗಿ ನಡೆಸಿ: ಇಂಗ್ಲೆಂಡ್ ಕ್ರಿಕೆಟ್‌ಗೆ ಬಿಸಿಸಿಐ ಮನವಿ
ಐಪಿಎಲ್ನಲ್ಲಿ ಇದೀಗ ಉಳಿದುಕೊಂಡಿರುವ 31 ಪಂದ್ಯ ಸೆಪ್ಟೆಂಬರ್ ತಿಂಗಳಲ್ಲಿ ನಡೆಸುವ ಯೋಜನೆ ಹಾಕಿಕೊಂಡಿರುವ ಬಿಸಿಸಿಐ, ಭಾರತ-ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿ ಒಂದು ವಾರ ಮುಂಚಿತವಾಗಿ ನಡೆಸುವಂತೆ ಹೇಳಿಕೊಂಡಿತ್ತು. ಈ ಟೂರ್ನಿ ಆಗಸ್ಟ್ 4ಕ್ಕೆ ಆರಂಭಗೊಂಡು ಸೆಪ್ಟೆಂಬರ್ 14ಕ್ಕೆ ಕೊನೆಗೊಳ್ಳಬೇಕಾಗಿತ್ತು. ಒಂದು ವಾರ ಮುಂಚಿತವಾಗಿ ಆರಂಭಗೊಂಡರೆ ಐಪಿಎಲ್ ನಡೆಸಲು ಸಹಾಯವಾಗುತ್ತಿತ್ತು ಎಂಬುದು ಬಿಸಿಸಿಐ ಇರಾದೆಯಾಗಿದೆ.
ಇಸಿಬಿ ಹೇಳಿದ್ದೇನು?
ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಐದು ಟೆಸ್ಟ್ ಪಂದ್ಯಗಳ ಸರಣಿ ದಿನಾಂಕ ಮುಂದೂಡಿಕೆ ಮಾಡಲು ನಮಗೆ ಯಾವುದೇ ಅಧಿಕೃತ ಮನವಿ ಬಂದಿಲ್ಲ. ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ವರದಿ ಸತ್ಯಕ್ಕೆ ದೂರು ಎಂದಿದೆ.
ನಾವು ನಿಯಮಿತವಾಗಿ ಭಾರತೀಯ ಕ್ರಿಕೆಟ್ ಮಂಡಳಿ ಜತೆ ಸಂಪರ್ಕದಲ್ಲಿದ್ದು, ಇಲ್ಲಿಯವರೆಗೆ ಆ ರೀತಿಯ ಯಾವುದೇ ಮನವಿ ನಮಗೆ ಬಂದಿಲ್ಲ. ಈಗಾಗಲೇ ನಿಗದಿಗೊಂಡಿರುವ ರೀತಿಯಲ್ಲಿ ಟೆಸ್ಟ್ ಸರಣಿ ಮುಂದುವರಿಯಲಿವೆ ಎಂದಿದೆ.