ಮುಂಬೈ: ಟಿ-20 ವಿಶ್ವಕಪ್ ಬಳಿಕ ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಸೇವಾವಧಿ ಅಂತ್ಯವಾಗಲಿದೆ. ಹಾಗಾಗಿ ಈ ಸ್ಥಾನ ತುಂಬಲು ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನು ಬಿಸಿಸಿಐ(BCCI) ಸಂಪರ್ಕಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಅಕ್ಟೋಬರ್-ನವೆಂಬರ್ನಲ್ಲಿ ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರ ಅವಧಿ ಮುಗಿಯಲಿದೆ. ಹಾಗಾಗಿ ನಾಲ್ಕು ವರ್ಷಗಳ ಹಿಂದೆ ಅಲ್ಪಾವಧಿಗೆ ಕೋಚ್ ಆಗಿದ್ದ ಕರ್ನಾಟಕದ ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನೇ ಮತ್ತೆ ಕೋಚ್ ಸ್ಥಾನ ಅಲಂಕರಿಸುವಂತೆ ಬಿಸಿಸಿಐ ಆಫರ್ ನೀಡಲು ಸಜ್ಜಾಗಿದೆ ಎನ್ನಲಾಗ್ತಿದೆ.
![BCCI approach Anil kumble for Team India head coach post](https://etvbharatimages.akamaized.net/etvbharat/prod-images/768-512-4876993-thumbnail-3x2-wdfdf_1809newsroom_1631922393_413.jpg)
ಐಪಿಎಲ್(IPL)ನಲ್ಲಿ ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ನಿರ್ದೇಶಕರಾಗಿರುವ ಕುಂಬ್ಳೆ 2017ರಲ್ಲಿ ಭಾರತ ತಂಡದ ಕೋಚ್ ಆಗಿದ್ದರು. ಆದರೆ ನಾಯಕ ಕೊಹ್ಲಿ ಜೊತೆಗೆ ಮನಸ್ತಾಪ ಉಂಟಾಗಿ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಮತ್ತೆ ಅನಿಲ್ ಕುಂಬ್ಳೆಯವರನ್ನು ತರಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಕೊಹ್ಲಿ ಜೊತೆಗೆ ಹೊಂದಾಣಿಕೆಯಾಗದ ಹೊರತಾಗಿಯೂ 2017ರಲ್ಲಿ ಕ್ರಿಕೆಟ್ ಇಂಪ್ರೂವ್ಮೆಂಟ್ ಸಮಿತಿಯ(CIC) ಸದಸ್ಯರಾಗಿದ್ದ ಗಂಗೂಲಿ ಅವರು ಕುಂಬ್ಳೆ ಕೋಚ್ ಆಗಿ ಮುಂದುವರಿಯಲು ಬಯಸಿದ್ದರು. 2016ರಲ್ಲಿ ಕೋಚ್ ಆಗಿ ಆಯ್ಕೆಯಾಗಿದ್ದ ಕುಂಬ್ಳೆ ಭಾರತ ತಂಡವನ್ನು ತಮ್ಮ ಮಾರ್ಗದರ್ಶನದಲ್ಲಿ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ಗೆ ಕೊಂಡೊಯ್ದಿದ್ದರು. ಆದರೆ ಭಾರತ ಪಾಕಿಸ್ತಾನದ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿತ್ತು.
ಕುಂಬ್ಳೆಯನ್ನು ಕೋಚ್ ಹುದ್ದೆಗೆ ಸಂಪರ್ಕಿಸುವ ನಿರ್ಧಾರ ತೆಗೆದುಕೊಳ್ಳುವ ಮುನ್ನ ಬಿಸಿಸಿಐ ಶ್ರೀಲಂಕಾದ ಮಾಜಿ ನಾಯಕ ಮತ್ತು ಮುಂಬೈ ಇಂಡಿಯನ್ಸ್ ಸತತ ಐಪಿಎಲ್ ಟ್ರೋಫಿ ಗೆಲ್ಲಲು ನೆರವಾಗಿರುವ ಮಹೇಲಾ ಜಯವರ್ದನೆಯವರನ್ನು ಸಂಪರ್ಕಿಸಿತ್ತು. ಆದರೆ ಜಯವರ್ದನೆ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಕೋಚ್ ಆಗಲು ಆಸಕ್ತಿ ಹೊಂದಿದ್ದಾರೆ. ಜೊತೆಗೆ ಭಾರತ ತಂಡದ ಕೋಚ್ ಆಗಬೇಕಾದರೆ ಮುಂಬೈ ತಂಡಕ್ಕೆ ರಾಜೀನಾಮೆ ನೀಡಬೇಕಾಗಿದೆ. ಹಾಗಾಗಿ ಅವರು ಬಿಸಿಸಿಐ ಆಫರ್ ಅನ್ನು ತಿರುಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ:ಉಪನಾಯಕ ಸ್ಥಾನದಿಂದ ರೋಹಿತ್ ಕೆಳಗಿಳಿಸುವಂತೆ ಕೊಹ್ಲಿ ಮನವಿ ಮಾಡಿದ್ರಾ?