ನವದೆಹಲಿ: ಬಾರ್ಡರ್-ಗವಾಸ್ಕರ್ ಟ್ರೋಫಿ 2023ರ ಮೂರನೇ ಪಂದ್ಯವನ್ನು ಹಿಮಾಚಲ ಪ್ರದೇಶದ ಧರ್ಮ ಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು. ಆದರೆ, ಕಾಮಗಾರಿ ಹಿನ್ನೆಲೆ ಔಟ್ ಪಿಚ್ನಲ್ಲಿ ಹುಲ್ಲು ಹಾಸು ಸರಿಯಾಗಿ ಬೆಳೆಯದ ಕಾರಣ ಪಂದ್ಯವನ್ನು ಮಧ್ಯಪ್ರದೇಶದ ಇಂದೋರ್ನಲ್ಲಿರುವ ಹೋಳ್ಕರ್ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿತ್ತು.
ಇಂದೋರ್ ಟೆಸ್ಟ್ ಪಿಚ್‌ಗೆ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ನೀಡಿರುವ ಕಳಪೆ ರೇಟಿಂಗ್ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಐಸಿಸಿ ಆಕ್ಷೇಪಿಸಿ ಮನವಿ ಸಲ್ಲಿಸಿದೆ. ಇಬ್ಬರು ಸದಸ್ಯರ ಐಸಿಸಿ ಸಮಿತಿಯು 14 ದಿನಗಳಲ್ಲಿ ತನ್ನ ನಿರ್ಧಾರವನ್ನು ನೀಡುವ ಮೊದಲು ಪರಿಶೀಲಿಸುತ್ತದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ - ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯವು ಹೋಲ್ಕರ್ ಕ್ರೀಡಾಂಗಣದಲ್ಲಿ ಮೊದಲ ಎರಡು ದಿನಗಳಲ್ಲಿ 30 ವಿಕೆಟ್‌ಗಳ ಪತನದ ನಂತರ ಮೂರನೇ ದಿನದ ಮೊದಲ ಸೆಷನ್‌ನಲ್ಲಿ ಪಂದ್ಯ ಕೊನೆಗೊಂಡಿತ್ತು.
ಪಂದ್ಯದಲ್ಲಿ ಉರುಳಿದ 31 ವಿಕೆಟ್‌ಗಳಲ್ಲಿ 26 ಸ್ಪಿನ್ನರ್‌ಗಳ ಪಾಲಾಯಿತು. ಮೊದಲ ಎರಡು ಟೆಸ್ಟ್‌ಗಳಲ್ಲಿ ಸೋತ ನಂತರ ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ ಗೆದ್ದು ಸರಣಿಯಲ್ಲಿ ಒಂದು ಗೆಲುವು ದಾಖಲಿಸಿಕೊಂಡಿತು. ಪಂದ್ಯ ಮುಗಿದ ನಂತರ, ಮ್ಯಾಚ್ ರೆಫರಿ ಬ್ರಾಡ್ ತಮ್ಮ ವರದಿಯಲ್ಲಿ ಪಿಚ್ ತುಂಬಾ ಒಣಗಿದೆ, ಬ್ಯಾಟ್ ಮತ್ತು ಬಾಲ್ ನಡುವೆ ಸಮತೋಲನವನ್ನು ಒದಗಿಸುತ್ತಿಲ್ಲ ಎಂದು ಹೇಳಿದರು. ಪಿಚ್ ಆರಂಭದಿಂದಲೂ ಸ್ಪಿನ್ನರ್‌ಗಳ ಪರವಾಗಿತ್ತು. ಪಂದ್ಯದ ಉದ್ದಕ್ಕೂ ವಿಪರೀತ ಮತ್ತು ಅಸಮವಾದ ಬೌನ್ಸ್ ಇತ್ತು ಎಂದು ಅವರು ಹೇಳಿದರು.
ಕಳೆಪ ಅಂಕದ ಪರಿಣಾಮ: ಐಸಿಸಿ ಪಿಚ್ ಮತ್ತು ಔಟ್‌ಫೀಲ್ಡ್ ಮಾನಿಟರಿಂಗ್ ಪ್ರಕ್ರಿಯೆಯ ಪ್ರಕಾರ, ಐದು ವರ್ಷಗಳ ರೋಲಿಂಗ್ ಅವಧಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಪಾಯಿಂಟ್‌ಗಳನ್ನು ಸಂಗ್ರಹಿಸಿದರೆ 12 ತಿಂಗಳ ಅವಧಿಗೆ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆತಿಥ್ಯ ವಹಿಸದಂತೆ ಸ್ಥಳವನ್ನು ಅಮಾನತುಗೊಳಿಸಲಾಗುತ್ತದೆ. ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಮೂರು ಡಿಮೆರಿಟ್ ಪಾಯಿಂಟ್‌ಗಳನ್ನು ಪಿಚ್‌ಗೆ ನೀಡಿದ್ದರು.
ಮೂರನೇ ಟೆಸ್ಟ್‌ನಲ್ಲಿ ಎರಡೂ ತಂಡಗಳ ನಾಯಕರಾದ ರೋಹಿತ್ ಶರ್ಮಾ ಮತ್ತು ಸ್ಟೀವ್ ಸ್ಮಿತ್ ಇಬ್ಬರೊಂದಿಗೆ ಸಮಾಲೋಚಿಸಿದ ನಂತರ ಐಸಿಸಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ತಮ್ಮ ವರದಿಯನ್ನು ಸಲ್ಲಿಸಿದ ನಂತರ ಹೋಳ್ಕರ್ ಕ್ರೀಡಾಂಗಣವು ಮೂರು ಡಿಮೆರಿಟ್ (-3) ಅಂಕಗಳನ್ನು ಪಡೆದಿತ್ತು. ಮಾರ್ಚ್ 3 ರಂದು ಕ್ರಿಸ್ ಬ್ರಾಡ್ ಕಳಪೆ ಎಂದು ವರದಿ ನೀಡಿದ್ದರು.
ಪಿಚ್ ಬಗ್ಗೆ ಮಾತನಾಡಿದ್ದ ಕ್ರಿಸ್ ಬ್ರಾಡ್, "ತುಂಬಾ ಶುಷ್ಕವಾಗಿದ್ದ ಪಿಚ್, ಬ್ಯಾಟ್ ಮತ್ತು ಬಾಲ್ ನಡುವೆ ಸಮತೋಲನ ಕಂಡು ಬಂದಿರಲಿಲ್ಲ. ಆರಂಭದಿಂದಲೂ ಸ್ಪಿನ್ನರ್‌ಗಳಿಗೆ ಅನುಕೂಲವಾಗಿತ್ತು. ಪಂದ್ಯದ ಐದನೇ ಚೆಂಡು ಪಿಚ್ ಮೇಲ್ಮೈಯಿಂದ ಭೇದಿಸಲ್ಪಟ್ಟಿತ್ತು ಮತ್ತು ಪಿಚ್ನಲ್ಲಿ ಯಾವುದೇ ಸೀಮ್ ಕಂಡು ಬಂದಿಲ್ಲ. ಪಂದ್ಯದ ಉದ್ದಕ್ಕೂ ವಿಪರೀತವಾದ ಬೌನ್ಸ್ ಕಂಡು ಬಂತು" ಎಂದಿದ್ದಾರೆ.
ಇದನ್ನೂ ಓದಿ: WTC 2023: ಭಾರತೀಯ ಆಟಗಾರರ ಪ್ರದರ್ಶನ ಹೀಗಿದೆ..