ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಟೀಮ್ ಇಂಡಿಯಾದ ಪ್ರಮುಖ ಪ್ರಾಯೋಜಕರಾಗಿ ಡ್ರೀಮ್ 11 ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಪ್ರಕಟಿಸಿದೆ. ಬೈಜುಸ್ ಅವರ ಒಪ್ಪಂದ ಈ ವರ್ಷದ ಮಾರ್ಚ್‌ನಲ್ಲಿ ಕೊನೆಗೊಂಡಿದೆ. ಡ್ರೀಮ್ 11 ಬಿಸಿಸಿಐ ಯೊಂದಿಗೆ 3 ವರ್ಷಗಳ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25 ಲೀಗ್ನ ಪ್ರವಾಸದ ಮೊದಲ ಟೆಸ್ಟ್ನಿಂದ ಈ ಜರ್ಸಿಯನ್ನು ಭಾರತ ತಂಡ ತೊಡಲಿದೆ. ಇದೇ 12 ರಿಂದ ವೆಸ್ಟ್ ಇಂಡೀಸ್ನಲ್ಲಿ ಎರಡು ಟೆಸ್ಟ್ನ ಮೂಲಕ ಸರಣಿ ಆರಂಭವಾಗಲಿದೆ. ಜುಲೈ ಅರ್ಧದಿಂದ ಆರಂಭವಾಗಿ ಆಗಸ್ಟ್ ಎರಡನೇ ವಾರದ ವರೆಗೆ ಭಾರತ ವೆಸ್ಟ್ ಇಂಡೀಸ್ ವಿರುದ್ಧದ 2 ಟೆಸ್ಟ್, 3 ಏಕದಿನ ಮತ್ತು 5 ಟಿ-20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಪಂದ್ಯಕ್ಕೆ ಅಡಿಡಾಸ್ನ ನೂತನ ಜರ್ಸಿಯ ಜೊತೆಗೆ ಡ್ರೀಮ್ 11ನ ಪ್ರಯೋಜಕತ್ವ ಇರಲಿದೆ.
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, "ನಾನು ಡ್ರೀಮ್11 ಅನ್ನು ಅಭಿನಂದಿಸುತ್ತೇನೆ ಮತ್ತು ಅವರನ್ನು ಮತ್ತೊಮ್ಮೆ ಸ್ವಾಗತಿಸುತ್ತೇನೆ. ಬಿಸಿಸಿಐಯ ಅಧಿಕೃತ ಪ್ರಾಯೋಜಕರಾಗಿದ್ದ ಡ್ರೀಮ್ 11 ಇನ್ನು ಪ್ರಮುಖ ಪಾಲುದಾರಾಗಿರಲ್ಲಿದ್ದಾರೆ. BCCI-Dream11 ಪಾಲುದಾರಿಕೆಯು ಪರಸ್ಪರ ಬಲದಿಂದ ಬೆಳೆಯಲಿದೆ ಎಂಬುದು ನಂಬಿಕೆಯಾಗಿದೆ. ಇದು ಭಾರತೀಯ ಕ್ರಿಕೆಟ್ ನೀಡುವ ನಂಬಿಕೆ, ಮೌಲ್ಯ, ಸಾಮರ್ಥ್ಯ ಮತ್ತು ಬೆಳವಣಿಗೆಗೆ ನೇರ ಸಾಕ್ಷಿಯಾಗಿದೆ" ಎಂದಿದ್ದಾರೆ.
"ಈ ವರ್ಷದ ಕೊನೆಯಲ್ಲಿ ಐಸಿಸಿ ವಿಶ್ವಕಪ್ ಅನ್ನು ಆಯೋಜಿಸಲು ನಾವು ತಯಾರಿ ನಡೆಸುತ್ತಿರುವಾಗ, ಅಭಿಮಾನಿಗಳ ಅನುಭವವನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಈ ಪಾಲುದಾರಿಕೆಯು ಅಭಿಮಾನಿಗಳ ಅನುಭವವನ್ನು ಹೆಚ್ಚಿಸಲು ನಮಗೆ ಸಹಾಯ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಹೇಳಿಕೊಂಡಿದ್ದಾರೆ.
ಡ್ರೀಮ್ ಸ್ಪೋರ್ಟ್ಸ್ನ ಸಹ-ಸಂಸ್ಥಾಪಕ ಮತ್ತು ಸಿಇಒ ಹರ್ಷ್ ಜೈನ್, "ಬಿಸಿಸಿಐ ಮತ್ತು ಟೀಮ್ ಇಂಡಿಯಾದ ದೀರ್ಘಕಾಲದ ಪಾಲುದಾರರಾಗಿ ಡ್ರೀಮ್ 11 ನಮ್ಮ ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ರೋಮಾಂಚನಗೊಂಡಿದೆ. ಡ್ರೀಮ್ 11 ನಲ್ಲಿ ನಾವು ಕ್ರಿಕೆಟ್ ಮೇಲಿನ ನಮ್ಮ ಪ್ರೀತಿಯನ್ನು ಶತಕೋಟಿ ಭಾರತೀಯರೊಂದಿಗೆ ಹಂಚಿಕೊಳ್ಳುತ್ತೇವೆ. ಕ್ರಿಕೆಟ್ ಅಭಿಮಾನಿಗಳು ಮತ್ತು ರಾಷ್ಟ್ರೀಯ ತಂಡಕ್ಕೆ ಪ್ರಮುಖ ಪ್ರಾಯೋಜಕರಾಗಲು ಹೆಮ್ಮೆಯ ವಿಷಯ. ನಾವು ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವುದನ್ನು ಮುಂದುವರಿಸಲು ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದ ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.
ಇದನ್ನೂ ಓದಿ: ಬೈಜುಸ್ ಜಾಗಕ್ಕೆ ಡ್ರೀಮ್ 11: ಫ್ಯಾಂಟಸಿ ಗೇಮಿಂಗ್ ಸಂಸ್ಥೆಗೆ ಟೀಂ ಇಂಡಿಯಾ ಜರ್ಸಿ ಪ್ರಾಯೋಜಕತ್ವ