ಕ್ಯಾನ್ಬೆರಾ (ಆಸ್ಟ್ರೇಲಿಯಾ): ಆಸಿಸ್ನ ಪ್ರತಿಷ್ಠಿತ ಚುಟುಕು ಕ್ರಿಕೆಟ್ ಟೂರ್ನಿ ಬಿಗ್ ಬ್ಯಾಷ್ ಲೀಗ್ನಲ್ಲಿ ಹೊಸ ನಿಯಮ ಜಾರಿಗೆ ತರಲು ಕ್ರಿಕೆಟ್ ಆಸ್ಟ್ರೇಲಿಯಾ ಗಂಭೀರ ಚಿಂತನೆ ನಡೆಸಿದೆ. ಪ್ರತಿ ವರ್ಷವೂ ಬಿಗ್ ಬ್ಯಾಷ್ ಲೀಗ್ ಪಂದ್ಯಗಳು ನಿಗದಿತ ಅವಧಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು, ಇದೀಗ ಈ ಸಮಯವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.
ಇದರಿಂದ ಟೂರ್ನಿ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂಬುದು ಕ್ರಿಕೆಟ್ ತಜ್ಞರ ವಾದ. ಖಾಸಗಿ ಮಾಧ್ಯಮವೊಂದರ ವರದಿಯಂತೆ, ಕ್ರಿಕೆಟ್ ಆಸ್ಟ್ರೇಲಿಯಾದ ಪ್ಲೇಯಿಂಗ್ ಕಂಡಿಷನ್ ಸಮಿತಿ ಬ್ಯಾಟಿಂಗ್ ಸಮಯ ಕಡಿತಗೊಳಿಸಲು ಮುಂದಾಗಿದೆ. ಇದರ ಜೊತೆಗೆ, ‘ಶಾರ್ಟ್ ಟೈಮಿಂಗ್ ಮ್ಯಾಚ್’ ನಡೆಸುವ ಕುರಿತು ಯೋಜನೆ ರೂಪಿಸುತ್ತಿದೆಯಂತೆ. ವಿಕೆಟ್ ಪತನಗೊಂಡಾಗ ಬ್ಯಾಟ್ಸ್ಮನ್ ಕ್ರೀಸ್ಗೆ ಬಂದು ಮುಂದಿನ ಎಸೆತ ಎದುರಿಸುವಾಗ ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಆರೋಪ.
ಈ ಹಿನ್ನೆಲೆಯಲ್ಲಿ ತಡವಾಗಿ ಕ್ರೀಸ್ಗಿಳಿಯುವ ಆಟಗಾರರ ಸಂಭಾವ್ಯ ತಲೆದಂಡಕ್ಕೆ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಈ ಮೊದಲು ಆಟಗಾರ ಔಟ್ ಆದಾಗ ಅಥವಾ ಗಾಯಗೊಂಡು ಪೆವಿಲಿಯನ್ ಸೇರಿದಾಗ ಆ ಜಾಗಕ್ಕೆ ಹೊಸ ಆಟಗಾರ ಬಂದು ಆತ ಕ್ರೀಸ್ನಲ್ಲಿ 3 ನಿಮಿಷಗಳೊಳಗೆ ಗಾರ್ಡ್ ಪಡೆದಿರಬೇಕು. ಆದರೆ ಇದು ಸಾಧ್ಯವಾಗದಿದ್ದರೆ ಅಂತಹ ಆಟಗಾರನನ್ನು ಔಟ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಬಿಬಿಎಲ್ ಲೀಗ್ನಲ್ಲಿ ಈ ಸಮಯವನ್ನು 75 ಸೆಕೆಂಡ್ಗೆ ಇಳಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಬೌಲರ್ಗೆ ಸಿಗಲಿದೆ ಫ್ರೀ ಬಾಲ್
ಒಂದು ವರದಿಯ ಪ್ರಕಾರ, ಆಸಿಸ್ ಸಮಿತಿಯು ಬೌಲರ್ಗಳಿಗೂ ಫ್ರೀ ಹಿಟ್ ಮಾದರಿಯ ನಿಯಮ ಜಾರಿಯ ಪ್ರಸ್ತಾವನೆ ಮುಂದಿಟ್ಟಿದೆಯಂತೆ. ಬ್ಯಾಟ್ಸ್ಮನ್ಗೆ ನೀಡಲಾದ ನಿಗದಿತ ಸಮಯದೊಳಗೆ ಕ್ರೀಸ್ಗೆ ಬಂದು ಮುಂದಿನ ಎಸೆತ ಎದುರಿಸಲು ಸಿದ್ಧವಾಗುವಲ್ಲಿ ವಿಫಲವಾದರೆ ಬೌಲರ್ಗೆ ಫ್ರೀ ಬಾಲ್ ನೀಡಲಾಗುವುದಂತೆ. ಈ ವೇಳೆ ಬ್ಯಾಟ್ಸ್ಮನ್ ವಿಕೆಟ್ನಿಂದ ದೂರ ಸರಿದು ನಿಲ್ಲಬೇಕಿದೆ. ಬೌಲರ್ ಎಸೆದ ಬಾಲ್ ವಿಕೆಟ್ಗೆ ಬಿದ್ದರೆ ಬ್ಯಾಟ್ಸ್ಮನ್ ಔಟ್ ಎಂದು ಪರಿಗಣಿಸುವ ನಿಯಮ ಟೇಬಲ್ ಮುಂದಿದೆಯಂತೆ.
ಇದನ್ನೂ ಓದಿ: ವಿಶ್ವ ಕುಸ್ತಿ ಚಾಂಪಿಯನ್ಶಿಪ್: ಭಾರತದ ಸರಿತಾಗೆ ಕಂಚು