ಬೆಂಗಳೂರು: ಏಷ್ಯಾಕಪ್ ಮತ್ತು ವಿಶ್ವಕಪ್ಗೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡಕ್ಕೆ ಯೋ-ಯೋ ಟೆಸ್ಟ್ ನಡೆಸಲಾಗಿದ್ದು, ವಿರಾಟ್ ಕೊಹ್ಲಿ 17.5 ಅಂಕ ಪಡೆದಿದ್ದಾರೆ. ತವರು ನೆಲದಲ್ಲೇ ಈ ಬಾರಿ ವಿಶ್ವಕಪ್ ನಡೆಯುತ್ತಿದ್ದು, ತಂಡ ಗೆಲುವಿನ ವಿಶ್ವಾಸದಲ್ಲಿದೆ.
ಎದುರಾಳಿಗಳಿಗೆ ಸಿಂಹಸ್ವಪ್ನದಂತೆ ಕಾಡುವ ವಿರಾಟ್ ಕೊಹ್ಲಿ ಈಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 15 ವರ್ಷ ಪೂರೈಸಿದ್ದಾರೆ. ಸದ್ಯದ ಕ್ರಿಕೆಟ್ನ 'ಪ್ಯಾಬ್ ಫೋರ್' ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ. ವಿಶ್ವಕಪ್ಗೆ ಭರ್ಜರಿ ತಯಾರಿ ನಡೆಸುತ್ತಿರುವ ಆಟಗಾರ ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.
ವಿಶ್ವಕಪ್ಗೆ ಕಾತರ: ಈ ಬಗ್ಗೆ ಮಾತನಾಡಿರುವ ಕೊಹ್ಲಿ, 15 ವರ್ಷಗಳ ನಂತರವೂ ನಾನು ವಿಶ್ವದ ಅಗ್ರ ತಂಡಗಳು ಅಥವಾ ಆಟಗಾರರ ವಿರುದ್ಧದ ಮುಖಾಮುಖಿ ಇಷ್ಟಪಡುವೆ. ಮುಂಬರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ತವರಿನಲ್ಲಿ ನಡೆಯುತ್ತಿರುವುದನ್ನು ಎದುರು ನೋಡುತ್ತಿದ್ದೇನೆ. ಕಪ್ ಗೆಲ್ಲುವ ಬಗ್ಗೆ ನನಗಿಂತಲೂ ಹೆಚ್ಚು ಯಾರೂ ಇಷ್ಟಪಡಲಿಕ್ಕಿಲ್ಲ. ನನ್ನ ಆಟದಲ್ಲಿ ಇನ್ನಷ್ಟು ಪ್ರಖರತೆ ಕಾಣಲು ಬಯಸುವೆ ಎಂದು ಹೇಳಿದ್ದಾರೆ.
ನಿಮ್ಮ ಮುಂದೆ ಎಂಥದ್ದೇ ಸವಾಲು ಬಂದರೂ ಅದರಿಂದ ಕುಗ್ಗಬೇಡಿ. ಸಂಕಷ್ಟಗಳೇ ನಿಮ್ಮನ್ನು ಇನ್ನಷ್ಟು ದೃಢರನ್ನಾಗಿ ಮಾಡುತ್ತದೆ. ನೀವು ಅದರಿಂದ ದೂರ ಸರಿಯಬೇಡಿ. 15 ವರ್ಷಗಳ ನಂತರ ನಾನು ಇನ್ನೂ ಅಗ್ರ ತಂಡ ಮತ್ತು ಆಟಗಾರರ ಎದುರು ಸೆಣಸಲು ಬಯಸುವೆ. ವಿಶ್ವಕಪ್ ಗೆಲುವಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದೇನೆ ಎಂದು ಸೋಮವಾರ ಬೆಂಗಳೂರಿನಲ್ಲಿ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಕೊಹ್ಲಿ ಹೇಳಿದರು.
ಕೊಹ್ಲಿ ಶ್ರೇಷ್ಠ ಕ್ರಿಕೆಟಿಗ: ಕ್ರಿಕೆಟ್ನಲ್ಲಿ ಒತ್ತಡ ಸಾಮಾನ್ಯ. ಅಭಿಮಾನಿಗಳು ಯಾವಾಗಲೂ ಅವರ ತಂಡ ಕಪ್ ಗೆಲ್ಲಬೇಕು ಎಂದೇ ನಿರೀಕ್ಷಿಸುತ್ತಾರೆ. ಅದರ ಬಗ್ಗೆ ನನಗೆ ಗೊತ್ತಿದೆ. ನನ್ನ ಮೇಲೂ ಹೆಚ್ಚಿನ ನಿರೀಕ್ಷೆಗಳಿವೆ. ಆದರೆ, ಆಟಗಾರರ ಶ್ರಮಕ್ಕಿಂತಲೂ ಹೆಚ್ಚಿನದ್ದೇನು ಮಾಡಲು ಸಾಧ್ಯವಿಲ್ಲ. ಇದನ್ನು ದಯವಿಟ್ಟು ತಿಳಿದುಕೊಳ್ಳಿ ಎಂದು ಹೇಳಿದರು.
ಪಾಕಿಸ್ತಾನ- ಶ್ರೀಲಂಕಾದಲ್ಲಿ ಆಗಸ್ಟ್ 30 ರಿಂದ ಏಷ್ಯಾ ಕಪ್ ಆರಂಭವಾಗಲಿದ್ದು, ಇದಾದ ಬಳಿಕ ಅಕ್ಟೋಬರ್ 5 ರಿಂದ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. 2011 ರ ವಿಶ್ವಕಪ್ನ ಪಂದ್ಯಾವಳಿಯಲ್ಲಿ 23 ವರ್ಷದ ಕೊಹ್ಲಿ ಸಾಮಾನ್ಯ ಆಟಗಾರರಾಗಿದ್ದರು. ಈ ಸಲದ ಆವೃತ್ತಿಯಲ್ಲಿ ನಿರ್ವಿವಾದವಾಗಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗಿದ್ದಾರೆ. ತವರಿನ ಅಭಿಮಾನಿಗಳ ಮುಂದೆ ಮತ್ತೊಮ್ಮೆ ವಿಶ್ವಕಪ್ ಎತ್ತಿ ಹಿಡಿಯುವ ನಿರೀಕ್ಷೆ ಹೊಂದಿದ್ದಾರೆ.
ಇದನ್ನೂ ಓದಿ: ಮಹಾರಾಜ ಟ್ರೋಫಿ: ಮೈಸೂರು - ಹುಬ್ಬಳ್ಳಿ ಮಧ್ಯೆ ಇಂದು ಫೈನಲ್ ಕಾದಾಟ, 2ನೇ ಸೆಮೀಸ್ನಲ್ಲಿ ಗುಲ್ಬರ್ಗಕ್ಕೆ ಸೋಲು