ಬೆಂಗಳೂರು: ನೆದರ್ಲೆಂಡ್ಸ್ ವೇಗಿ ಬಾಸ್ ಡಿ ಲೀಡ್ ಅವರು ತಮ್ಮ ತಂದೆ ಟಿಮ್ ಡಿ ಲೀಡೆ ಅವರನ್ನು ಹಿಂದಿಕ್ಕಿ ವಿಶ್ವಕಪ್‌ನಲ್ಲಿ ಡಚ್ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಭಾನುವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ವಿರುದ್ಧದ ಏಕದಿನ ವಿಶ್ವಕಪ್ 2023ರ 45ನೇ ಪಂದ್ಯದಲ್ಲಿ ಡಿ ಲೀಡ್ ಈ ಹೆಗ್ಗುರುತು ಮೂಡಿಸಿದ್ದಾರೆ.
ಪ್ರತಿಷ್ಠಿತ ಪಂದ್ಯಾವಳಿಯಲ್ಲಿ 15 ವಿಕೆಟ್‌ಗಳೊಂದಿಗೆ, ಬಾಸ್ ಡಿ ಲೀಡೆ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್‌ಗಾಗಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಹೊಂದಿದ್ದಾರೆ. ಡಿ ಲೀಡೆ ತಂದೆ ಟಿಮ್ ಡಿ ಲೀಡೆ 14 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಡಚ್ ತಂಡದ ಆಟಗಾರರಾದ ಲೋಗನ್ ವ್ಯಾನ್ ಬೀಕ್ ಮತ್ತು ಪಾಲ್ ವ್ಯಾನ್ ಮೀಕೆರೆನ್ ತಲಾ 12 ವಿಕೆಟ್‌ಗಳೊಂದಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
- " class="align-text-top noRightClick twitterSection" data="">
ದುಬಾರಿ ಆದ ವ್ಯಾನ್ ಬೀಕ್: ಬೆಂಗಳೂರು ಪಂದ್ಯದಲ್ಲಿ 10 ಓವರ್ ಮಾಡಿದ ಲೋಗನ್ ವ್ಯಾನ್ ಬೀಕ್ ಯಾವುದೇ ವಿಕೆಟ್ ಪಡೆಯದೇ 107 ರನ್ ಬಿಟ್ಟುಕೊಟ್ಟರು. ಇದು ವಿಶ್ವಕಪ್‌ನಲ್ಲಿ ಮೂರನೇ ಅತಿ ದುಬಾರಿ ಬೌಲಿಂಗ್ ಎಂಬ ಅಪಖ್ಯಾತಿ ಪಡೆಯಿತು. ಬಾಸ್ ಡಿ ಲೀಡ್ ಇದೇ ವಿಶ್ವಕಪ್ (2023) ನಲ್ಲಿ ಆಸ್ಟ್ರೇಲಿಯಾ ವಿರುದ್ಧ 123 ರನ್ ಕೊಟ್ಟಿದ್ದು ಮೊದಲನೇಯದಾದರೆ, 2019ರ ವಿಶ್ವಕಪ್‌ನಲ್ಲಿ ರಶೀದ್ ಖಾನ್ ಇಂಗ್ಲೆಂಡ್ ವಿರುದ್ಧ 110 ರನ್ ಕೊಟ್ಟಿದ್ದು ಎರಡನೇ ಸ್ಥಾನ ಪಡೆದಿದೆ.
80+ ರನ್ ಕೊಟ್ಟ 3 ಬೌಲರ್ಗಳು: ಭಾರತದ ವಿರುದ್ಧದ ಪಂದ್ಯದಲ್ಲಿ ಲೋಗನ್ ವ್ಯಾನ್ ಬೀಕ್ 107 ರನ್, ಪಾಲ್ ವ್ಯಾನ್ ಮೀಕೆರೆನ್ 90 ಮತ್ತು ಬಾಸ್ ಡಿ ಲೀಡ್ 82 ರನ್ ಬಿಟ್ಟುಕೊಟ್ಟರು. 2023ರ ಏಕದಿನ ವಿಶ್ವಕಪ್‌ನಲ್ಲಿ ಮೂವರು 80+ ರನ್ ಕೊಟ್ಟ 3ನೇ ಪಂದ್ಯ ಇದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾದ 4 ಜನ ಬೌಲರ್ಗಳು ದೆಹಲಿ ಪಿಚ್ನಲ್ಲಿ 80+ ರನ್ ಕೊಟ್ಟಿದ್ದರು. ಬೆಂಗಳೂರಿನಲ್ಲಿ ಪಾಕಿಸ್ತಾನದ 3 ಬೌಲರ್ಗಳು ನ್ಯೂಜಿಲೆಂಡ್ ವಿರುದ್ಧ 80ಕ್ಕೂ ಹೆಚ್ಚು ರನ್ ಕೊಟ್ಟಿದ್ದರು.
ಪಂದ್ಯದಲ್ಲಿ: ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತು. ಶ್ರೇಯಸ್ ಅಯ್ಯರ್ (94 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 128*) ಮತ್ತು ಕೆಎಲ್ ರಾಹುಲ್ (102) ನೆದರ್ಲೆಂಡ್ಸ್ ವಿರುದ್ಧ ದ್ವಿಶತಕದ ಜೊತೆಯಾಟ ಆಡಿದರು. ಆರಂಭದಲ್ಲಿ ರೋಹಿತ್ ಶರ್ಮಾ (61), ಶುಭಮನ್ ಗಿಲ್ (51) ಮತ್ತು ವಿರಾಟ್ ಕೊಹ್ಲಿ (51) ಅರ್ಧಶತಲ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಬಾಸ್ ಡಿ ಲೀಡೆ (2/82) ನೆದರ್ಲೆಂಡ್ಸ್‌ನ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು. ಪಾಲ್ ವ್ಯಾನ್ ಮೀಕೆರೆನ್ (1/90) ಮತ್ತು ರೋಲೋಫ್ ವ್ಯಾನ್ ಡೆರ್ ಮೆರ್ವೆ (1/53) ಸಹ ತಲಾ ಒಂದು ವಿಕೆಟ್ ಪಡೆದರು. ಲೀಗ್ ಹಂತದಲ್ಲಿ ಸೋಲು ಕಾಣದೇ ಮುಂದುವರೆಯಲು ಟೀಮ್ ಇಂಡಿಯಾ 411 ರನ್ಗಳ ಗುರಿಯನ್ನು ನಿಯಂತ್ರಿಸಬೇಕಿದೆ.
ಇದನ್ನೂ ಓದಿ: ರೋ'ಹಿಟ್' ಅಬ್ಬರ: ಸಚಿನ್ ದಾಖಲೆ ಸರಿಗಟ್ಟಿದ ಶರ್ಮಾ; ಸಿಕ್ಸ್ನಲ್ಲಿ ಎಬಿಡಿ ರೆಕಾರ್ಡ್ ಉಡೀಸ್