ಢಾಕಾ: ಚುಟುಕು ಕ್ರಿಕೆಟ್ನಲ್ಲಿ ಬಲಿಷ್ಠ ನ್ಯೂಜಿಲ್ಯಾಂಡ್ ತಂಡಕ್ಕೆ ಶಾಕ್ ನೀಡಿರುವ ಬಾಂಗ್ಲಾದೇಶ ಐದು ಟಿ-20 ಪಂದ್ಯಗಳ ಸರಣಿಯಲ್ಲಿ 3-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ. ಒಂದು ಪಂದ್ಯ ಬಾಕಿ ಇರುವಾಗಲೇ ಕಿವೀಸ್ ವಿರುದ್ಧ ಚೊಚ್ಚಲ ಟಿ-20 ಸರಣಿ ಗೆದ್ದಿರುವ ಸಾಧನೆ ಮಾಡಿದೆ.
ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಮೈದಾನದಲ್ಲಿ ನಡೆದ 4ನೇ ಟಿ-20 ಪಂದ್ಯದಲ್ಲಿ 6 ವಿಕೆಟ್ಗಳ ಗೆಲುವು ದಾಖಲು ಮಾಡುವ ಮೂಲಕ ಮಹ್ಮದುಲ್ಲಾ ನೇತೃತ್ವದ ತಂಡ ಈ ಸಾಧನೆ ಮಾಡಿದೆ.
4ನೇ ಪಂದ್ಯದಲ್ಲಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಪ್ರವಾಸಿ ನ್ಯೂಜಿಲ್ಯಾಂಡ್ ತಂಡ 19.3 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 93 ರನ್ಗಳಿಕೆ ಮಾಡಿತು. ತಂಡದ ಪರ ವಿಲ್ ಯಂಗ್ 43 ಹಾಗೂ ಲಾಥಮ್ 21 ರನ್ಗಳಿಸಿ ಗರಿಷ್ಠ ಸ್ಕೋರರ್ ಆದರು. ಉಳಿದಂತೆ ಫಿನ್ ಆಲನ್ 12 ರನ್, ರವೀಂದ್ರ 0, ನಿಕೋಲಸ್ 1, ಗ್ರ್ಯಾಂಡ್ ಹೋಂ 0, ಅಜಾಜ್ ಪಟೇಲ್ 4 ರನ್ಗಳಿಕೆ ಮಾಡಿದರು.
ಬಾಂಗ್ಲಾದೇಶದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಅಹ್ಮದ್ ಹಾಗೂ ಮುಸ್ತಫಿಜುರ್ ತಲಾ 4 ವಿಕೆಟ್ ಪಡೆದುಕೊಂಡರೆ, ಸೈಫುದ್ದೀನ್, ಹಸನ್ 1 ವಿಕೆಟ್ ಪಡೆದುಕೊಂಡರು.
94 ರನ್ಗಳ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಲಿಟನ್ ದಾಸ್ 6, ಶಕೀಬ್ ಅಲ್ ಹಸನ್ 8 ಹಾಗೂ ರಹೀಮ್ 0 ವಿಕೆಟ್ ಕಳೆದುಕೊಂಡರೂ ಕೂಡ ಮೊಹಮ್ಮದ್ ನಯೀಮ್ 29ರನ್ ಹಾಗೂ ಕ್ಯಾಪ್ಟನ್ ಮಹ್ಮದುಲ್ಲಾ ಅಜೇಯ 43ರನ್ಗಳ ನೆರವಿನಿಂದ ಗೆಲುವಿನ ದಡ ಸೇರಿತು.
ತಂಡ 19.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 96 ರನ್ಗಳಿಕೆ ಮಾಡಿ ಚೊಚ್ಚಲ ಟಿ-20 ಸರಣಿ ಗೆದ್ದ ಸಾಧನೆ ಮಾಡಿತು. ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಅಹ್ಮದ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕಳೆದ ಕೆಲ ತಿಂಗಳಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಬಾಂಗ್ಲಾದೇಶ ಈಗಾಗಲೇ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನಕ್ಕೂ ಟಿ-20 ಕ್ರಿಕೆಟ್ನಲ್ಲಿ ಸೋಲಿನ ರುಚಿ ತೋರಿಸಿದ್ದು, ಇದೀಗ ನ್ಯೂಜಿಲ್ಯಾಂಡ್ ಮೇಲೆ ಸವಾರಿ ಮಾಡಿದೆ.