ಢಾಕಾ (ಬಾಂಗ್ಲಾದೇಶ): ಭಾರತದ ವಿರುದ್ಧದ ಏಕದಿನ ಸರಣಿಯನ್ನು ಬಾಂಗ್ಲಾದೇಶ 2-0 ಅಂತರದಿಂದ ಗೆದ್ದುಕೊಂಡಿದೆ. ಇಂದು ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುವ ಮೂಲಕ ಸರಣಿ ಸೋಲಿನ ಮುಖಭಂಗ ಅನುಭವಿಸಿತು.
ಢಾಕಾದ ಶೇರ್ ಎ ಬಾಂಗ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, 7 ವಿಕೆಟ್ ನಷ್ಟಕ್ಕೆ 271 ರನ್ಗಳನ್ನು ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ್ದ ರೋಹಿತ್ ಟೀಂ 9 ವಿಕೆಟ್‌ಗಳನ್ನು ಕಳೆದುಕೊಂಡು 266 ರನ್ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾ ಸರಣಿ ಗೆಲುವಿನ ಕೇಕೆ ಹಾಕಿತು. ಗಾಯಗೊಂಡು 9ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರೋಹಿತ್ ವೀರಾವೇಶದ ಹೋರಾಟ ಫಲ ನೀಡಲಿಲ್ಲ.
ಭಾರತಕ್ಕೆ ಆರಂಭಿಕ ಆಘಾತ: ಫೀಲ್ಡಿಂಗ್ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ನಾಯಕ ರೋಹಿತ್ ಶರ್ಮಾ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿಯಲು ಸಾಧ್ಯವಾಗಲಿಲ್ಲ. ಆದ್ದರಿಂದ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಕಣಕ್ಕಿಳಿದರು. ಇಬ್ಬರೂ ಕೂಡ ತಂಡಕ್ಕೆ ನಿರೀಕ್ಷಿತ ಆರಂಭ ನೀಡಲು ವಿಫಲರಾದರು.
ಕೇವಲ 5 ರನ್ಗಳ ವಿರಾಟ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 8 ರನ್ ಗಳಿಸಿದ್ದ ಧವನ್ ಕೂಡ ಪೆವಿಲಿಯನ್ ಸೇರಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸಿಗೆ ಬಂದಿದ್ದ ಶ್ರೇಯಸ್ ಅಯ್ಯರ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರು. ಶ್ರೇಯಸ್ಗೆ ಸರಿಯಾದ ಸಾಥ್ ಸಿಗಲಿಲ್ಲ. ವಾಷಿಂಗ್ಟನ್ ಸುಂದರ್ (11) ಹಾಗೂ ಮೊದಲ ಪಂದ್ಯ ಪಂದ್ಯದಲ್ಲಿ ವಿರೋಚಿತ ಆಟ ಪ್ರದರ್ಶಿಸಿದ್ದ ಕೆಎಲ್ ರಾಹುಲ್ (14) ಕೂಡ ಬೇಗ ಔಟಾದರು.
ತಂಡಕ್ಕೆ ಆಸರೆಯಾದ ಶ್ರೇಯಸ್-ಅಕ್ಷರ್: ನಂತರ ಶ್ರೇಯಸ್ ಜೊತೆಗೂಡಿದ ಅಕ್ಷರ್ ಪಟೇಲ್ ಕೊಂಚ ಬಿರುಸಿನಿಂದಲೇ ಬ್ಯಾಟ್ ಬೀಸಿದರು. ಈ ಜೋಡಿ ನೂರು ರನ್ಗಳ ಜೊತೆಯಾಟ ನೀಡಿ, ತಂಡಕ್ಕೆ ಆಸರೆಯಾದರು. ಅಲ್ಲದೇ, ಭಾರತಕ್ಕೆ ಗೆಲುವಿನ ಆಸೆಯನ್ನೂ ಮೂಡಿಸಿದ್ದರು. ಇದರ ನಡುವೆ ಉತ್ತಮವಾಗಿ ಆಡುತ್ತಿದ್ದ ಶ್ರೇಯಸ್, ಶಕೀಬ್ ಅಲ್ ಹಸನ್ ಬೌಲಿಂಗ್ನಲ್ಲಿ ಕಾಚಿತ್ತರು. 102 ಎಸೆತಗಳನ್ನು ಎದುರಿಸಿದ ಶ್ರೇಯಸ್ 3 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ 82 ರನ್ ಸಿಡಿಸಿದರು.
ಶ್ರೇಯಸ್ ಬಳಿಕ 100 ರನ್ ರೇಟ್ನಲ್ಲಿ 56 ರನ್ ಸಿಡಿಸಿದ್ದ ಅಕ್ಷರ್ ಪಟೇಲ್ ಕೂಡ ಔಟಾಗುವ ಮೂಲಕ ತಂಡಕ್ಕೆ ಆಘಾತ ನೀಡಿದರು. ಶಾರ್ದೂಲ್ ಠಾಕೂರ್ (7) ಮತ್ತು ದೀಪಕ್ ಚಹಾರ್ (11) ಕಾಣಿಕೆ ಒಪ್ಪಿಸಿ ಔಟಾದರು. ನಂತರ 9ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ನಾಯಕ ರೋಹಿತ್ ಆರಂಭದಲ್ಲಿ ಕೊಂಚ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು. ಆದರೆ, ನಂತರ ಹೊಡಿಬಡಿ ಆಟಕ್ಕೆ ಮುಂದಾಗಿ ಮತ್ತೆ ಗೆಲುವಿನ ಆಸೆ ಚಿಗುರಿಸಿದರು.
ಪಂದ್ಯದ ಕೊನೆಯ ಓವರ್ನಲ್ಲಿ ಭಾರತ ಗೆಲುವಿಗೆ 20 ರನ್ಗಳ ಅಗತ್ಯವಿತ್ತು. ಈ ಓವರ್ನಲ್ಲಿ ಮೊದಲ ಮೂರು ಎಸತೆಗಳಲ್ಲಿ ರೋಹಿತ್ ಎರಡು ಬೌಂಡರಿಗಳು ಬಾರಿಸಿದರು. ನಂತರ ಒಂದು ಸಿಕ್ಸರ್ ಬಾರಿಸಲು ಸಾಧ್ಯವಾಯಿತು. ಅಂತಿಮ ಎಸತೆದಲ್ಲಿ ಸಿಕ್ಸರ್ ಬೇಕಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಪರಿಣಾಮ ಸೋಲು ಅನುಭವಿಸಬೇಕಾಯಿತು. ರೋಹಿತ್ 28 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ ಅಮೋಘ 51 ಬಾರಿಸಿದರೂ ಅದು ಪಂದ್ಯ ಗೆಲ್ಲಿಸಲು ಸಾಕಾಗಲಿಲ್ಲ.
ಡಿಸೆಂಬರ್ 10ರಂದು ಅಂತಿಮ ಪಂದ್ಯ: ಬಾಂಗ್ಲಾ ಪರ ಎಬಾಡೋಟ್ ಹೊಸೈನ್ 3 ವಿಕೆಟ್ ಮತ್ತು ಮೆಹಿದಿ ಹಸನ್ ಮಿರಾಜ್, ಶಕೀಬ್ ಅಲ್ ಹಸನ್ ತಲಾ 2 ವಿಕೆಟ್ ಪಡೆದರೆ, ಮುಸ್ತಫಿಜುರ್ ರೆಹಮಾನ್, ಮಹಮ್ಮದುಲ್ಲಾ ತಲಾ 1 ವಿಕೆಟ್ ಕಬಳಿಸಿದರು. ಡಿಸೆಂಬರ್ 10ರಂದು ಚಿತ್ತಗಾಂಗ್ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ಏಕದಿನ ಸರಣಿಯ ಕೊನೆಯ ಹಾಗೂ ಅಂತಿಮ ಪಂದ್ಯ ನಡೆಯಲಿದೆ.
ಬಾಂಗ್ಲಾದಲ್ಲಿ ಭಾರತಕ್ಕೆ 2ನೇ ಸರಣಿ ಸೋಲು: ಬಾಂಗ್ಲಾ ನೆಲದಲ್ಲಿ ಭಾರತಕ್ಕೆ ಇದು ಎರಡನೇ ಸತತ ಏಕದಿನ ಸರಣಿಯ ಸೋಲಾಗಿದೆ. 2015ರಲ್ಲಿ ನಡೆದ ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ ಸಹ 1-2 ರಿಂದ ಅಂತರದಿಂದ ಸೋಲುಂಡಿತ್ತು. ಕೊನೆಯ ಪಂದ್ಯದಲ್ಲಿ ಮಾತ್ರ ಟೀಂ ಇಂಡಿಯಾ ಗೆದ್ದು ನಿಟ್ಟುಸಿರುಬಿಟ್ಟಿತ್ತು. ಈಗ ಮೊದಲೆರಡು ಪಂದ್ಯಗಳಲ್ಲಿ ಜಯ ದಾಖಲಿಸಿ ಬಾಂಗ್ಲಾ ಮತ್ತೆ ಸರಣಿ ಕೈವಶ ಮಾಡಿಕೊಂಡಿದ್ದು, ಅಂತಿಮ ಪಂದ್ಯದಲ್ಲಿ ಗೆದ್ದು ರೋಹಿತ್ ಪಡೆ ಮಾನ ಉಳಿಸಿಕೊಳ್ಳಬೇಕಾಗಿದೆ!.