ಢಾಕಾ(ಬಾಂಗ್ಲಾದೇಶ): ಟಿ-20 ಕ್ರಿಕೆಟ್ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಮೇಲೆ ಸವಾರಿ ಮಾಡುತ್ತಿರುವ ಬಾಂಗ್ಲಾದೇಶವು ಸತತ 3ನೇ ಪಂದ್ಯದಲ್ಲೂ ಗೆಲುವಿನ ನಗೆ ಬೀರಿದೆ. 128 ರನ್ಗಳ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಆಸ್ಟ್ರೇಲಿಯಾ ಇಂದಿನ ಪಂದ್ಯದಲ್ಲೂ ಸೋಲು ಕಂಡಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಆತಿಥೇಯರ ತಂಡ 3-0 ಅಂತರದ ಮುನ್ನಡೆ ಪಡೆದುಕೊಂಡಿದ್ದು, ಸರಣಿ ಕೈವಶ ಮಾಡಿಕೊಂಡಿದೆ.
ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ, ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 127 ರನ್ ಗಳಿಸಿತು. ತಂಡದ ಪರ ನಾಯಕ ಮೊಹಮ್ಮದುಲ್ಲಾ 52 ರನ್ ಬಾರಿಸಿ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದರು.
ಆಸ್ಟ್ರೇಲಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ನಾಥನ್ ಇಲ್ಸಿ 3 ವಿಕೆಟ್, ಹ್ಯಾಜಲ್ವುಡ್ ಹಾಗೂ ಜಂಪಾ ತಲಾ 2 ವಿಕೆಟ್ ಪಡೆದುಕೊಂಡರು. 128 ರನ್ಗಳ ಗುರಿ ಬೆನ್ನತ್ತಿದ ಕಾಂಗರೂ ಪಡೆ ಆರಂಭದಲ್ಲೇ ನಾಯಕ ಮ್ಯಾಥೋ ವೇಡ್ (1ರನ್) ವಿಕೆಟ್ ಕಳೆದುಕೊಂಡಿತು. ಆದರೆ, ಈ ವೇಳೆ ಒಂದಾದ ಬೆನ್ ಮ್ಯಾಕ್‌ಡರ್ಮೊಟ್(35ರನ್) ಹಾಗೂ ಮಿಚೆಲ್ ಮಾರ್ಷ್ (51) ಜೊತೆಯಾಟದ ಮೂಲಕ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು.
ಆದರೆ ಇವರ ವಿಕೆಟ್ ಪತಗೊಳ್ಳುತ್ತಿದ್ದಂತೆ ತಂಡ ಆಘಾತಕ್ಕೊಳಗಾಯಿತು. ಆರಂಭದ 15 ಓವರ್ಗಳಲ್ಲಿ 80 ರನ್ ಗಳಿಕೆಗೆ ಕೇವಲ 3 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾಗೆ ಕೊನೆಯ 5 ಓವರ್ಗಳಲ್ಲಿ 48 ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಮಿಚೆಲ್ ಮಾರ್ಷ್ ವಿಕೆಟ್ ಕಳೆದುಕೊಂಡಿದ್ದರಿಂದ ತಂಡ ಸೋಲಿಗೊಳಗಾಯಿತು.
ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ಸ್ (2), ಅಲೆಕ್ಸ್ ಕ್ಯಾರಿ (20) ಹಾಗೂ ಕ್ರಿಸ್ಟೋನ್(7) ಸ್ಫೋಟಕ ಆಟ ಆಡುವಲ್ಲಿ ವಿಫಲಗೊಂಡಿದ್ದರಿಂದ ತಂಡ 10 ರನ್ಗಳ ಸೋಲು ಅನುಭವಿಸುವಂತಾಯಿತು. ಆಸ್ಟ್ರೇಲಿಯಾ ಕೊನೆಯದಾಗಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 117 ರನ್ಗಳಿಕೆ ಮಾಡಲು ಮಾತ್ರ ಶಕ್ತವಾಯಿತು.
ಬಾಂಗ್ಲಾದೇಶದ ಪರ ಬೌಲಿಂಗ್ನಲ್ಲಿ ಮಿಂಚಿದ ಇಸ್ಲಾಂ 2 ವಿಕೆಟ್ ಪಡೆದುಕೊಂಡರೆ, ಅಹ್ಮದ್ ಹಾಗೂ ಹಸನ್ ತಲಾ 1 ವಿಕೆಟ್ ಪಡೆದುಕೊಂಡರು. ಸೌಮ್ಯ ಸರ್ಕಾರ್, ರಹಮಾನ್ ಹಾಗೂ ಮೆಹದಿ ಹಸನ್ ವಿಕೆಟ್ ಪಡೆದುಕೊಳ್ಳುವಲ್ಲಿ ವಿಫಲಗೊಂಡರೂ, ಅಧಿಕ ರನ್ ಬಿಟ್ಟು ಕೊಡಲಿಲ್ಲ. ಈಗಾಗಲೇ ಮುಕ್ತಾಯಗೊಂಡಿರುವ ಎರಡು ಟಿ-20 ಪಂದ್ಯಗಳಲ್ಲಿ ಬಾಂಗ್ಲಾದೇಶ ಜಯ ಸಾಧಿಸಿದ್ದು, ಇಂದಿನ ಪಂದ್ಯದಲ್ಲೂ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ.