ಬೆಂಗಳೂರು: ಆಲ್ರೌಂಡರ್ ಅಕ್ಷರ್ ಪಟೇಲ್ ಗಾಯದಿಂದ ಚೇತರಿಸಿಕೊಂಡು ಬಂದಿರುವುದರಿಂದ ರಿಸ್ಟ್ ಸ್ಪಿನ್ನರ್ ಕುಲ್ದೀಪ್ ಯಾದವ್ರನ್ನು ಭಾರತ ತಂಡದಿಂದ ಬಿಡುಗಡೆ ಮಾಡಲಾಗಿದೆ.
ಅಕ್ಷರ್ ಪಟೇಲ್ ಕಣಕಾಲಿನ ಗಾಯಕ್ಕೆ ತುತ್ತಾಗದ್ದರಿಂದ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ತವರಿನಲ್ಲಿ ನಡೆದ ಟಿ20 ಸರಣಿಗಳಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದರು. ಅಲ್ಲದೆ ವಿಂಡೀಸ್ ಸರಣಿಗೂ ಮುನ್ನ ಅವರು ಕೋವಿಡ್ ಸೋಂಕಿಗೂ ತುತ್ತಾಗಿದ್ದರು.
ಅಕ್ಷರ್ ನಮ್ಮ ಮೊದಲ ಆಯ್ಕೆಯಾಗಿದ್ದಾರೆ, ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣಕ್ಕಾಗಿ ಕುಲ್ದೀಪ್ ಅವರನ್ನು ಹೆಚ್ಚುವರಿ ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಅಕ್ಷರ್ ಫಿಟ್ ಆಗಿ ಮರಳಿದ್ದಾರೆ. ಆದ್ದರಿಂದ ಕುಲ್ದೀಪ್ ಯಾದವ್ರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.
ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಗೆ ತಂಡವನ್ನು ಘೋಷಿಸುವ ವೇಳೆ ಅಕ್ಷರ್ ಪಟೇಲ್ 2ನೇ ಪಂದ್ಯದ ವೇಳೆಗೆ ಆಯ್ಕೆಗೆ ಲಭ್ಯರಾಗಲಿದ್ದಾರೆ ಎಂದು ತಿಳಿಸಿತ್ತು. ಕುಲ್ದೀಪ್ 2021ರಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯವನ್ನಾಡಿದ್ದರು.
ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಪಡೆ ಇನ್ನಿಂಗ್ಸ್ ಮತ್ತು 222 ರನ್ಗಳ ಅಂತರದಿಂದ ಅಮೋಘ ಗೆಲುವು ಸಾಧಿಸಿದೆ. ಬೆಂಗಳೂರಿನಲ್ಲಿ ಮಾರ್ಚ್ 12 ರಿಂದ 16ರವರೆಗೆ ನಡೆಲ್ಲಿಯಲಿದೆ, ಈ ಪಂದ್ಯ ಹಗಲು ರಾತ್ರಿ ಪಂದ್ಯವಾಗಿದೆ.
ಇದನ್ನೂ ಓದಿ:2022ರ ಐಪಿಎಲ್ನ ಸಂಪೂರ್ಣ ಲೀಗ್ ವೇಳಾ ಪಟ್ಟಿ ಪ್ರಕಟಿಸಿದ ಬಿಸಿಸಿಐ