ಮೆಲ್ಬೋರ್ನ್: ಆಸ್ಟ್ರೇಲಿಯಾದ ಸೀಮಿತ ಓವರ್ಗಳ ನಾಯಕ ಆ್ಯರೋನ್ ಫಿಂಚ್, ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ದಿನಗಳು ಬಹುತೇಕ ಅಂತ್ಯವಾಗಿವೆ ಎಂದು ತಿಳಿಸಿದ್ದು, ಮುಂಬರುವ ಮಾರ್ಷ್ ಶೆಫೀಲ್ಡ್ ಶೀಲ್ಡ್ ಟೂರ್ನಮೆಂಟ್ನಲ್ಲಿ ಆಡುವ ಯಾವುದೇ ಯೋಚನೆಯಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ತಾವೂ ಕೂಡಾ ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿಯುವ ಸುಳಿವು ನೀಡಿದ್ದಾರೆ.
ಪಾಕಿಸ್ತಾನದ ವಿರುದ್ಧ ಸೀಮಿತ ಓವರ್ಗಳ ಸರಣಿಗೂ ಮುನ್ನ ಮಾರ್ಷಕಪ್ನಲ್ಲಿ ವಿಕ್ಟೋರಿಯಾ ತಂಡದ ಪರ ಆಡಿದ ಫಿಂಚ್ 100 ಎಸೆತಗಳಲ್ಲಿ 67 ರನ್ಗಳಿಸಿದ್ದರು. ಆದರೆ ಅವರ ಈ ಆಟ ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಪಂದ್ಯದ ನಂತರ ಮಾಧ್ಯಮದ ಜೊತೆ ಮಾತನಾಡಿದ ಹಿರಿಯ ಬ್ಯಾಟರ್ ಫಿಂಚ್, ಮುಂದಿನ ವಾರ ತಸ್ಮೇನಿಯಾ ವಿರುದ್ಧ ನಡೆಯಲಿರುವ ಶೆಫೀಲ್ಡ್ ಶೀಲ್ಡ್ ಪಂದ್ಯಕ್ಕೆ ತಾವೂ ಲಭ್ಯರಿರುವುದಿಲ್ಲ ಎಂದು ತಿಳಿಸಿದ್ದಾರೆ.
ನಾನು ಮತ್ತೆ ಅಲ್ಲಿ(ಶೀಲ್ಡ್ ಟೂರ್ನಿ) ಆಡುತ್ತೇನೆ ಎಂದು ನಾನು ಭಾವಿಸುವುದಿಲ್ಲ. ಅಲ್ಲಿ ಆಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಾನು ಮತ್ತೆ ಆಸ್ಟ್ರೇಲಿಯಾ ಪರ ಟೆಸ್ಟ್ ಆಡುವುದಕ್ಕೆ ಹೋಗುವುದಿಲ್ಲ, ಹಾಗಾಗಿ ನಮ್ಮ ತಂಡದಲ್ಲಿ(ವಿಕ್ಟೋರಿಯಾ) ಹಲವಾರು ಯುವ ಆಟಗಾರರಿದ್ದು, ಅವರೆಲ್ಲರೂ ಪ್ರತಿಭಾವಂತರಾಗಿದ್ದಾರೆ. ನಾನು ಅವರ ಸ್ಥಾನವನ್ನು ಆಕ್ರಮಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ರೆಡ್ ಬಾಲ್ ಕ್ರಿಕೆಟ್ ಆಡುವುದಕ್ಕೆ ಇಷ್ಟಪಡುತ್ತೇನೆ, ಆದರೆ ನೀವು ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇಲ್ಲ ಎಂದು ಗೊತ್ತಿರುವಾಗ, ಇಲ್ಲಿ ಆಡುವುದು ವ್ಯರ್ಥ ಎಂದು ಫಿಂಚ್ ಹೇಳಿದ್ದಾರೆ.
ಈ ಆವೃತ್ತಿಯಲ್ಲಿ ಟಿ20 ವಿಶ್ವಕಪ್ ಸೇರಿದಂತೆ ಸಾಕಷ್ಟು ಸೀಮಿತ ಓವರ್ಗಳ ಸರಣಿಗಳಿರುವುದರಿಂದ ನನ್ನನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶವಿಲ್ಲ ಎಂದು 35 ವರ್ಷದ ಹಿರಿಯ ಬ್ಯಾಟರ್ ಅಭಿಪ್ರಾಯಪಟ್ಟಿದ್ದಾರೆ.
ಫಿಂಚ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 88 ಪಂದ್ಯಗಳನ್ನಾಡಿದ್ದು 35.8ರ ಸರಾಸರಿಯಲ್ಲಿ 4915 ರನ್ಗಳಿಸಿದ್ದಾರೆ. ಇದರಲ್ಲಿ 7 ಶತಕ ಮತ್ತು 33 ಅರ್ಧಶತಕಗಳಿವೆ. 2018ರಲ್ಲಿ ಆಸೀಸ್ ಪರ ಪದಾರ್ಪಣೆ ಮಾಡಿದ ಅವರು, ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಿದ್ದು, 278 ರನ್ಗಳಿಸಿದ್ದಾರೆ.
ಇದನ್ನೂ ಓದಿ:ಮಹಿಳಾ ವಿಶ್ವಕಪ್: ಪಾಕಿಸ್ತಾನ ಮಣಿಸಿ ಅಗ್ರಸ್ಥಾನಕ್ಕೇರಿದ ಆಸ್ಟ್ರೇಲಿಯಾ