ಹಾಗ್ಲೆ ಓವಲ್(ಕ್ರೈಸ್ಟ್ ಚರ್ಚ್): ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ಗೆ 356 ರನ್‌ಗಳ ಬೃಹತ್ ಗುರಿ ನೀಡಿದೆ. ಆಸಿಸ್ ಪರವಾಗಿ ಶತಕದಾಟವಾಡಿದ ಅಲಿಸ್ಸಾ ಹೀಲಿ 138 ಎಸೆತಗಳಿಗೆ 170 ರನ್ ಗಳಿಸಿ ವಿನೂತನ ದಾಖಲೆ ಬರೆದರು.
ಈ ಮೂಲಕ, ಅಲಿಸ್ಸಾ ಹೀಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳೆರಡರಲ್ಲೂ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆಗೆ ಪಾತ್ರರಾದರು. ಇವರ ನಂತರದ ಸ್ಥಾನಗಳಲ್ಲಿ ಆಸ್ಟ್ರೇಲಿಯಾದ ಆ್ಯಡಂ ಗಿಲ್ಕ್ರಿಸ್ಟ್ (149 ರನ್) ರಿಕಿ ಪಾಟಿಂಗ್ (140 ರನ್) ಮತ್ತು ವಿವಿಯನ್ ರಿಚರ್ಡ್ಸ್ (138 ರನ್) ಇದ್ದಾರೆ.
ಹೀಲಿ ಜೊತೆಗೆ ಆರ್.ಹೇನ್ಸ್ 68 ರನ್, ಬೆತ್ ಮೂನಿ 62 ರನ್ ಗಳಿಸಿ ತಂಡ ಹೆಚ್ಚು ಮೊತ್ತ ದಾಖಲಿಸಲು ನೆರವಾದರು. ಇಂಗ್ಲೆಂಡ್ ಬೌಲಿಂಗ್ ವಿಚಾರಕ್ಕೆ ಬರುವುದಾದರೆ, ಅನ್ಯ ಶ್ರಬ್ಸೋಲ್ 3 ವಿಕೆಟ್ ಹಾಗು ಎಸ್ಸೆಸ್ಟೋನ್ 1 ವಿಕೆಟ್ ಪಡೆದರು.
ಮಹಿಳೆಯರ ಏಕದಿನ ಪಂದ್ಯಗಳಲ್ಲೂ ಅಲಿಸ್ಸಾ ಹೀಲಿ ದಾಖಲೆ ಬರೆದಿದ್ದು, ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಏರಿದ್ದಾರೆ. ಮೊದಲ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ನ ಎ.ಸಿ.ಕೆರ್ (232 ರನ್) ನಂತರದ ಸ್ಥಾನಗಳಲ್ಲಿ ಆಸ್ಟ್ರೇಲಿಯಾದ ಬಿಜೆ ಕ್ಲಾರ್ಕ್ (229 ರನ್), ಭಾರತದ ಡಿಬಿ ಶರ್ಮ(188 ರನ್), ಶ್ರೀಲಂಕಾದ ಎಎಂಸಿಜೆಕೆ ಅಟ್ಟಪಟ್ಟು (178 ರನ್), ಇಂಗ್ಲೆಂಡ್ನ ಸಿಎಂ ಎಡ್ವರ್ಡ್ಸ್ (173 ರನ್), ಭಾರತದ ಹರ್ಮನ್ ಪ್ರೀತ್ ಕೌರ್ (171 ರನ್) ವೆಸ್ಟ್ ಇಂಡೀಸ್ನ ಎಸ್ಆರ್ ಟೈಲರ್ (171 ರನ್) ಗಳಿಸಿದ್ದಾರೆ.
ಈ ಪಂದ್ಯದ ಮತ್ತಷ್ಟು ದಾಖಲೆಗಳು:
- ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಗರಿಷ್ಠ ಮೊತ್ತ
- ಪುರುಷ ಮತ್ತು ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಎರಡನೇ ಅತಿ ಹೆಚ್ಚು
- ಯಾವುದೇ ವಿಶ್ವಕಪ್ ಫೈನಲ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್
- ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಅತ್ಯಧಿಕ ಜೊತೆಯಾಟ
ಇದೀಗ ಇಂಗ್ಲೆಂಡ್ ವನಿತೆಯರು ಬ್ಯಾಟಿಂಗ್ ನಡೆಸುತ್ತಿದ್ದು, 6 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿದ್ದಾರೆ.