ಹೈದರಾಬಾದ್ : ವಿಶ್ವಕಪ್ ಸೆಮಿಫೈನಲ್ ಗುದ್ದಾಟಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಈಗಾಗಲೇ ಸತತ ಎಂಟು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ ಅಧಿಕೃತವಾಗಿ ಸೆಮೀಸ್ಗೆ ಲಗ್ಗೆ ಇಟ್ಟಿದೆ. ಇದರ ಜೊತೆಗೆ ದಕ್ಷಿಣ ಆಫ್ರಿಕಾ ತಂಡವೂ ಸೆಮಿ ಫೈನಲ್ ಸುತ್ತನ್ನು ಪ್ರವೇಶಿಸಿದೆ. ಅಂಕಪಟ್ಟಿಯಲ್ಲಿ 16 ಅಂಕಗಳಿಸಿ ಭಾರತ ಮೊದಲ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ ಆರು ಪಂದ್ಯಗಳಲ್ಲಿ ಗೆದ್ದು 12 ಅಂಕ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ. ಸದ್ಯ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳಿವೆ.
ಆಸ್ಟ್ರೇಲಿಯಾ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿ 10 ಅಂಕ ಪಡೆದು ಮೂರನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ 4 ಪಂದ್ಯಗಳಲ್ಲಿ ಜಯಗಳಿಸಿ 8 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಇದರ ನಡುವೆ ಸೆಮೀಸ್ ಪ್ರವೇಶಿಸಲು ವಿವಿಧ ತಂಡಗಳ ನಡುವೆ ಪೈಪೋಟಿ ಶುರುವಾಗಿದೆ.
ನಾಳೆ ಆಸ್ಟ್ರೇಲಿಯಾ - ಅಫ್ಘಾನಿಸ್ತಾನ್ ಪಂದ್ಯ : ಮಂಗಳವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ್ ಮುಖಾಮುಖಿಯಾಗಲಿದೆ. ನಾಯಕ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಚೆನ್ನೈನಲ್ಲಿ ಭಾರತ ವಿರುದ್ಧ ಮತ್ತು ಲಖನೌನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ ಸತತವಾಗಿ ಗೆಲುವು ಸಾಧಿಸಿಕೊಂಡು ಬಂದಿದೆ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 33 ರನ್ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಆಸ್ಟ್ರೇಲಿಯಾ ನಾಳೆ ವಾಂಖೆಡೆ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿ ಸೆಮೀಸ್ಗೆ ಪ್ರವೇಶಿಸುವ ಆತುರದಲ್ಲಿದೆ.
ವೈಯಕ್ತಿಕ ಕಾರಣಗಳಿಂದ ಮನೆಗೆ ತೆರಳಿದ್ದ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್ರೌಂಡರ್ ಮಿಶೆಲ್ ಮಾರ್ಷ್ ಮರಳಿ ತಂಡ ಸೇರಿರುವುದು ಆನೆ ಬಲ ಬಂದಂತಾಗಿದೆ. ಜೊತೆಗೆ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಅದ್ಭುತ ಬ್ಯಾಟಿಂಗ್ ಮುಂದುವರೆಸಿದ್ದಾರೆ. ವಾರ್ನರ್ ಈಗಾಗಲೇ ವಿಶ್ವಕಪ್ನಲ್ಲಿ 428 ರನ್ ಗಳಿಸಿದ್ದು, ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ್ದಾರೆ. ತಂಡಕ್ಕೆ ಮರಳಿರುವ ಮಿಶೆಲ್ ಮಾರ್ಷ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇನ್ನು ಮಾರ್ಕಸ್ ಸ್ಟೋನಿಸ್, ಆ್ಯಡಂ ಜಂಪಾ, ಹೆಜಲ್ವುಡ್, ಮಿಶೆಲ್ ಸ್ಟಾರ್ಕ್, ಕ್ಯಾಮರೂನ್ ಗ್ರೀನ್ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೂ ಆಸ್ಟ್ರೇಲಿಯಾ ಅಫ್ಘಾನಿಸ್ತಾನವನ್ನು ಅಷ್ಟು ಲಘುವಾಗಿ ಪರಿಗಣಿಸುವಂತಿಲ್ಲ.
ಅಫ್ಘಾನಿಸ್ತಾನಕ್ಕೆ ತಂಡದ ಸ್ಪಿನ್ ಬಲ ವರವಾಗಿ ಪರಣಮಿಸಿದೆ. ರಶೀದ್ ಖಾನ್ ಮತ್ತು ಮುಜೀಬ್ ಉರ್ ರೆಹಮಾನ್ ಆಸ್ಟ್ರೇಲಿಯನ್ ಬ್ಯಾಟರ್ಗಳನ್ನು ಕಾಡುವ ಸಾಧ್ಯತೆ ಇದೆ. ಎರಡು ತಂಡಗಳ ಸೆಮೀಸ್ ಕಾದಾಟಕ್ಕೆ ವಾಂಖೆಡೆ ಸ್ಟೇಡಿಯಂ ಸಾಕ್ಷಿಯಾಗಲಿದೆ.
ಇದನ್ನೂ ಓದಿ : 'ವಿರಾಟ್' ಸಾಧನೆಗೆ ಭರಪೂರ ಬಹುಪರಾಕ್: ಯಾರು, ಏನಂದ್ರು?