ಬ್ರಿಸ್ಬೇನ್: ಡಿಸೆಂಬರ್ 8ರಿಂದ ಬ್ರಿಸ್ಬೇನ್ ಗಬ್ಬಾದಲ್ಲಿ ಆರಂಭವಾಗಲಿರುವ ಆ್ಯಶಸ್ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಟ್ರಾವಿಸ್ ಹೆಡ್ ಮತ್ತು ಫಾರ್ಮ್ ಕಳೆದುಕೊಂಡಿರುವ ವೇಗಿ ಮಿಚೆಲ್ ಸ್ಟಾರ್ಕ್ ವೇಗಿ ಅವಕಾಶ ಪಡೆದುಕೊಂಡಿದ್ದಾರೆ.
ಪ್ಯಾಟ್ ಕಮಿನ್ಸ್ ನಾಯಕನಾಗಿ ಆಸ್ಟ್ರೇಲಿಯಾ ತಂಡವನ್ನು ಮೊದಲ ಬಾರಿಗೆ ಮುನ್ನಡೆಸುತ್ತಿದ್ದಾರೆ. ಸ್ಟೀವ್ ಸ್ಮಿತ್ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಟಿಮ್ ಪೇನ್ ತಂಡದಿಂದ ಹೊರಬಿದ್ದಿರುವುದರಿಂದ ಅಲೆಕ್ಸ್ ಕ್ಯಾರಿ ವಿಕೆಟ್ ಕೀಪರ್ ಆಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಭಾರತ ವಿರುದ್ಧ ಸರಣಿಯ ವೇಳೆ ತಂಡದಿಂದ ಹೊರಬಿದ್ದಿದ್ದ ಟ್ರಾವಿಸ್ ಹೆಡ್ ಶೆಫೀಲ್ಡ್ ಶೀಲ್ಡ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ 11ರ ಬಳಗಕ್ಕೆ ಮರಳಿದ್ದಾರೆ.
ಶೇನ್ ವಾರ್ನ್ ಸೇರಿದಂತೆ ಕೆಲವು ಮಾಜಿ ಕ್ರಿಕೆಟಿಗರು ಮಿಚೆಲ್ ಸ್ಟಾರ್ಕ್ ಆ್ಯಶಸ್ ಸರಣಿಯಲ್ಲಿ ಅವಕಾಶ ಪಡೆಯುವುದು ಅನುಮಾನ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಮ್ಯಾನೇಜ್ ಮೆಂಟ್ ವೇಗಿಗೆ ಮತ್ತೊಂದು ಅವಕಾಶ ನೀಡಿದೆ. ಶೆಫೀಲ್ಡ್ ಶೀಲ್ಡ್ನಲ್ಲಿ 4 ಪಂದ್ಯಗಳಿಂದ 23 ವಿಕೆಟ್ ಪಡೆದಿದ್ದ ಜೇ ರಿಚರ್ಡ್ಸನ್ ಮತ್ತೆ ಬೆಂಚ್ ಕಾಯುವಂತಾಗಿದೆ.
ಸ್ಟಾರ್ಕ್ ಮತ್ತು ಕಮ್ಮಿನ್ಸ್ ಜೊತೆಗೆ ಜೋಶ್ ಹೆಜಲ್‌ವುಡ್ ಹಾಗೂ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಬೌಲಿಂಗ್ ವಿಭಾಗದಲ್ಲಿದ್ದಾರೆ. ಡೇವಿಡ್ ವಾರ್ನರ್ ಜೊತೆಗೆ ಮಾರ್ಕಸ್ ಹ್ಯಾರೀಸ್ ಇನ್ನಿಂಗ್ಸ್ ಆರಂಭಿಸುವುದು ಕೂಡ ಖಚಿತವಾಗಿದೆ. ಇಂಗ್ಲೆಂಡ್ ತಂಡ ಮುಂಚಿತವಾಗಿ ತಂಡವನ್ನು ಘೋಷಿಸದಿದ್ದರೂ ಸಹಾ ಸ್ಪಿನ್ನರ್ ಜಾಕ್ ಲೀಚ್ ಆಡಲಿದ್ದಾರೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡ:ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಾಬುಶೇನ್ ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹೆಜಲ್‌ವುಡ್
ಇದನ್ನೂ ಓದಿ:ಕುಂಬ್ಳೆ, ಭಜ್ಜಿ, ಕಪಿಲ್ ದೇವ್ ಅಂತಹ ದಿಗ್ಗಜರನ್ನ ಹಿಂದಿಕ್ಕಿ ವಿಶೇಷ ದಾಖಲೆ ಬರೆದ ಅಶ್ವಿನ್