ಮುಂಬೈ: 2020-21ರ ಆಸ್ಟ್ರೇಲಿಯಾ ಪ್ರವಾಸ ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಎಂದು ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ತಿಳಿಸಿದ್ದಾರೆ. ಆ ಪ್ರವಾಸದಲ್ಲಿ ಅವರು ಒಂದು ಸೋಲುವ ಪಂದ್ಯವನ್ನು ಡ್ರಾಗೊಳ್ಳಲು ಮತ್ತು ಗಬ್ಬಾದಲ್ಲಿ ನಡೆದಿದ್ದ ಕೊನೆಯ ಪಂದ್ಯ ಗೆಲ್ಲುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಪ್ರವಾಸದಲ್ಲಿ ಭಾರತ ತಂಡ ಸಾಕಷ್ಟು ಗಾಯಕ್ಕೆ ತುತ್ತಾಗಿತ್ತು. ಪ್ರಮುಖ ಆಟಗಾರರಾದ ರಾಹುಲ್, ಅಶ್ವಿನ್, ಬುಮ್ರಾ, ಶಮಿ ಮತ್ತು ಉಮೇಶ್ ಯಾದವ್ ಅಂತಹ ಸ್ಟಾರ್ ಆಟಗಾರರು ಗಾಯದಿಂದಾಗಿ ತಂಡದಿಂದ ಹೊರಬಿದ್ದರು. ಆದರೆ, ಯುವ ಆಟಗಾರರನ್ನು ಕೊಹ್ಲಿ ಅನುಪಸ್ಥಿತಿಯಲ್ಲಿ ಅದ್ಭುತವಾಗಿ ಮುನ್ನಡೆಸಿದ ರಹಾನೆ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಲು ನೆರವಾಗಿದ್ದರು.
ಇನ್ನೂ ಮೊದಲ ಪಂದ್ಯದಲ್ಲಿ ಬೆಂಚ್ ಕಾಯ್ದಿದ್ದ ರಿಷಭ್ ಪಂತ್ ನಂತರ 3 ಪಂದ್ಯಗಳನ್ನಾಡಿದ್ದರು. 3 ಮತ್ತು 4ನೇ ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ ಆಸ್ಟ್ರೇಲಿಯಾವನ್ನು ಸೋಲಿಸಲು ಅಸಾಧ್ಯ ಎಂದೇ ಬಿಂಬಿತವಾಗಿದ್ದ ಗಬ್ಬಾದಲ್ಲಿ ದಾಖಲೆಯ ರನ್ ಚೇಸ್ ಮಾಡುವುದರಲ್ಲಿ ಇವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು.
ಭಾರತೀಯ ಮಹಿಳಾ ಆಟಗಾರ್ತಿ ಜಮೀಮಾ ರೋಡ್ರಿಗಸ್ ಜೊತೆಗೆ ಡ್ರೀಮ್ ಇಲೆವೆನ್ ಯ್ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಪಂತ್ 'ತಾವೂ ತಂಡದಿಂದ ಹೊರ ಬಿದ್ದಾಗ ಅನುಭವಿಸಿದ ಯಾತನೆ, ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು ಸೇರಿದಂತೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಂಡದಿಂದಾಗಿ ನಾನು ಯಾರೊಬ್ಬರ ಜೊತೆಗೂ ಮಾತನಾಡುತ್ತಿರಲಿಲ್ಲ, ಕುಟುಂಬಸ್ಥರು ಅಥವಾ ಸ್ನೇಹಿತರ ಜೊತೆಗೂ ಕೂಡ. ನನಗೆ ನನ್ನದೇ ಆದ ಜಾಗ ಬೇಕಿತ್ತು. ಪ್ರತಿಯೊಂದು ದಿನವೂ ನನ್ನ ಶೇ.200 ಪ್ರತಿಶತವನ್ನು ನೀಡಲು ಬಯಸುತ್ತಿದ್ದೆ ಎಂದು ತಿಳಿಸಿದ್ದಾರೆ.
ಏನು ನಡೆಯುತ್ತದೆ ಎಂದು ಆಲೋಚನೆ ಮಾಡ್ತಿದ್ದೆ: ತಮ್ಮ ಜೀವನದ ಅತ್ಯಂತ ಕೆಟ್ಟ ಸನ್ನಿವೇಶದ ಬಗ್ಗೆ ಮಾತನಾಡಿದ ಅವರು, 2019ರ ವಿಶ್ವಕಪ್ ನಂತರ ನಂತರ ನನ್ನನ್ನು ಸೀಮಿತ ಓವರ್ಗಳ ತಂಡದಿಂದ ಕೈಬಿಡಲಾಯಿತು. ನನಗೆ 22-23 ವರ್ಷ,ಅಲ್ಲಿ ಏನು ನಡೆಯುತ್ತಿದೆ ಎಂದು ಆಲೋಚನೆ ಮಾಡುತ್ತಿದ್ದೆ. ಅದು ನನ್ನ ಜೀವನ ಅತ್ಯಂತ ಕೆಟ್ಟ ಕ್ಷಣವಾಗಿತ್ತು.
ಮಾನಸಿಕವಾಗಿ ಕುಸಿದಿದ್ದೆ, ಈಗ ಏನು ಮಾಡುವುದು ಎಂದು ಸದಾ ಆಲೋಚಿಸುತ್ತಿದ್ದೆ. ಏಕೆಂದರೆ ತಂಡದಿಂದ ಕೈಬಿಟ್ಟಿದ್ದು, ಒಂದು ಕಡೆಯಾದರೆ, ಮತ್ತೊಂದು ಕಡೆ ನನ್ನ ವಿರುದ್ಧ ಮಾತುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಆ ಸಮಯದಲ್ಲಿ ನಾನು ಏಕಾಂಗಿಯಾಗಿ ಕುಳಿತು, ವೈಯಕ್ತಿತವಾಗಿ ಏನು ಮಾಡಬಹುದು ಎಂದು ಆಲೋಚನೆ ಮಾಡುತ್ತಿದ್ದೆ.
ಆ ಸಮಯದಲ್ಲಿ ನನ್ನಲ್ಲಿ ಬರುತ್ತಿದ್ದ ಏಕಮಾತ್ರ ಆಲೋಚನೆಯೆಂದರೆ, ವಿಷಯಗಳು ಏನೇ ಆದರೂ, ಪ್ರತಿಯೊಂದು ದಿನವೂ ಕಠಿಣ ಪರಿಶ್ರಮ ಪಡಬೇಕು. 200 ಪ್ರತಿಶತ ಪಯತ್ನ ಹಾಕಬೇಕು. ಫಲಿತಾಂಶ ಏನೇ ಆದರೂ ಸ್ವೀಕರಿಸಲು ಸಿದ್ಧವಾಗಿರಬೇಕು. ಹಾಗಾಗಿ ಭಾರತವನ್ನು ಗೆಲ್ಲಿಸಲು ನನಗೆ ಇದನ್ನು ಮಾಡುವುದನ್ನು ಬಿಟ್ಟರೆ, ನನ್ನ ಬಳಿ ಬೇರೇನು ಆಯ್ಕೆಯಿಲ್ಲ ಎಂದು ತಿಳಿದುಕೊಂಡೆ ಎಂದು ಅವರು ವಿವರಿಸಿದ್ದಾರೆ.
2020ರ ಆಸೀಸ್ ಪ್ರವಾಸ ನನ್ನ ಜೀವನದ ಟರ್ನಿಂಗ್ ಪಾಯಿಂಟ್: ಅಡಿಲೇಡ್ನಲ್ಲಿ ನಡೆದಿದ್ದ ಪಿಂಕ್ ಬಾಲ್ ಟೆಸ್ಟ್ನಲ್ಲಿ ವೃದ್ಧಿಮಾನ್ ಸಹಾ ಕಳಪೆ ಪ್ರದರ್ಶನ ನೀಡಿದರು. ಜೊತೆಗೆ ಭಾರತ ತಂಡ 36ಕ್ಕೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತ್ತು. ಹಾಗಾಗಿ ಪಂತ್ಗೆ ನಂತರದ ಮೂರು ಟೆಸ್ಟ್ ಪಂದ್ಯಗಳಲ್ಲಿ ಅವಕಾಶ ಪಡೆದಿದ್ದರು.
ಸಿಡ್ನಿಯಲ್ಲಿ ನಡೆದಿದ್ದ 3ನೇ ಟೆಸ್ಟ್ ಪಂದ್ಯದಲ್ಲಿ 97ರನ್ಗಳಿಸಿ ಪಂದ್ಯವನ್ನು ಡ್ರಾಗೊಳಿಸಿದ್ದರು, ಆದರೆ, ಆ ಪಂದ್ಯದ ಮೂರನೇ ದಿನ ಬ್ಯಾಟಿಂಗ್ ಮಾಡುವಾಗ ಭುಜಕ್ಕೆ ಚೆಂಡು ಬಿದ್ದು ಗಾಯಗೊಂಡಿದ್ದರು. ಆದರೂ ತಂಡವನ್ನು ಸೋಲಿನಿಂದ ಪಾರು ಮಾಡುವುದಕ್ಕಾಗಿ ಬ್ಯಾಟಿಂಗ್ ಮುಂದುವರಿಸಿದ್ದನ್ನು ಸ್ಮರಿಸಿಕೊಂಡರು.
" ಪಂದ್ಯ ನಡೆಯುವಾಗ ನಾನು ನೋವು ನಿವಾರಕ ಇಂಜೆಕ್ಷನ್ ತೆಗೆದುಕೊಂಡಿದ್ದೆ. ನೆಟ್ಸ್ಗೆ ತೆರೆಳಿ ಬ್ಯಾಟಿಂಗ್ ಮಾಡುವುದಕ್ಕೆ ಪ್ರಯತ್ನಿಸಿದ್ದೆ, ಆ ಸಂದರ್ಭದಲ್ಲಿ ನೋವಿನಿಂದ ತುಂಬಾ ನರಳಾಡಿದ್ದಿದೆ. ಜೊತೆಗೆ ಪೆಟ್ಟಾದ ನಂತರ ಗೊಂದಲಕ್ಕೊಳಗಾಗಿದ್ದೆ ಮತ್ತು ಭಯಪಟ್ಟಿದ್ದೆ. ಏಕೆಂದರೆ ಪ್ಯಾಟ್ ಕಮ್ಮಿನ್ಸ್,ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಜಲ್ವುಡ್ ಸಾಕಷ್ಟು ವೇಗವಾಗಿ ಬೌಲಿಂಗ್ ಮಾಡುತ್ತಿದ್ದರು" ಎಂದು ಪಂತ್ ನೆನಪಿಸಿಕೊಂಡರು.
ಇನ್ನು ಆ ಪಂದ್ಯದಲ್ಲಿ ರಹಾನೆ ಲಂಚ್ಗೂ ಮುನ್ನ ಔಟಾದ ನಂತರ ನನ್ನಲ್ಲಿ ಯೋಚನೆ ಹೆಚ್ಚಾಯಿತು, ಆದರೆ, ಒಂದೆರಡು ಬೌಂಡರಿಗಳು ಬಂದ ಮೇಲೆ ಪ್ರತಿಯೊಂದು ಎಸೆತದ ಕಡೆಗೂ ಗಮನ ಹೆಚ್ಚಾಯಿತು. ಪಂದ್ಯದ ಮೇಲೆ ನನ್ನ ಗಮನ ಕೇಂದ್ರೀಕೃತವಾಗಿದ್ದರಿಂದ ನೋವು ಕೂಡ ಕಡಿಮೆಯಾಯಿತು. ನಾನು ಸುಲಭವಾಗಿ ರನ್ ಗಳಿಸಲು ಶುರುಮಾಡಿದೆ, ಆ ಸಂದರ್ಭದಲ್ಲಿ ಪಂದ್ಯದ ಸ್ಥಿತಿ ಬದಲಾಗಿ ನಾವು ಗೆಲುವಿನತ್ತ ಮುಖ ಮಾಡಿದ್ದೆವು.
97ಕ್ಕೆ ಔಟಾದಾಗ ಈ ಪಂದ್ಯದಲ್ಲಿ ನಾನು ಶತಕ ಪೂರ್ಣಗೊಳಿಸಲಿಲ್ಲ ಎನ್ನುವುದಕ್ಕಿಂತ ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾಗದಿರುವುದಕ್ಕೆ ನನಗೆ ಬೇಸರ ಉಂಟಾಯಿತು. ಆದರೆ ಅಶ್ವಿನ್ ಮತ್ತು ವಿಹಾರಿ ಸಾಕಷ್ಟು ಹೊಡೆತಗಳನ್ನು ತಿಂದು ಪಂದ್ಯವನ್ನು ಉಳಿಸಿದರು. ಇದು ಸರಣಿಯಲ್ಲಿ ನಮಗೆ ಸಿಕ್ಕ ದೊಡ್ಡ ಟರ್ನಿಂಗ್ ಪಾಯಿಂಟ್, ಹಾಗೇ ನನ್ನ ವೃತ್ತಿ ಜೀವನಕ್ಕೂ ಕೂಡ. ನಂತರ ಗಬ್ಬಾ ವಿಜಯ" ಎಂದು ಪಂತ್ ತಮ್ಮ ವೃತ್ತಿ ಜೀವನ ಗಟ್ಟಿಯಾಗಿ ನೆಲೆಯೂರಲು ನೆರವಾದ ಸರಣಿಯ ಬಗ್ಗೆ ವಿವರಿಸಿದ್ದಾರೆ.
ಇದನ್ನೂ ಓದಿ:ಐಪಿಎಲ್ ಪ್ರಸಾರದ ಹಕ್ಕಿನ ಮೇಲೆ ಆ್ಯಪಲ್, ಯೂಟ್ಯೂಬ್ ಸೇರಿದಂತೆ ವಿಶ್ವದ ದಿಗ್ಗಜ ಕಂಪನಿಗಳ ಕಣ್ಣು