ದುಬೈ: ಬಾಂಗ್ಲಾದೇಶ ತಂಡವನ್ನು 8 ವಿಕೆಟ್ಗಳಿಂದ ಮಣಿಸುವ ಮೂಲಕ ಆಸ್ಟ್ರೇಲಿಯಾ ತಂಡ 2ನೇ ಗುಂಪಿನಲ್ಲಿ 2ನೇ ಸ್ಥಾನಕ್ಕೇರಿದ್ದಲ್ಲದೆ, 82 ಎಸೆತಗಳಿರುವಂತೆ ಜಯ ಸಾಧಿಸಿ ನೆಟ್ರನ್ರೇಟ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿದೆ.
ಸೆಮಿಫೈನಲ್ ರೇಸ್ನಲ್ಲಿ ಉಳಿದುಕೊಳ್ಳಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ಬಾಂಗ್ಲಾದೇಶ ತಂಡವನ್ನು ಕೇವಲ 73 ಕ್ಕೆ ಆಲೌಟ್ ಮಾಡಿತ್ತು.
ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದ ಬಾಂಗ್ಲಾದೇಶ ತಂಡ ಇಂದಿನ ಪಂದ್ಯದಲ್ಲೂ ತನ್ನ ಕಳಪೆ ಬ್ಯಾಟಿಂಗ್ ಮುಂದುವರಿಸಿತು. ವಿಶ್ವಕಪ್ಗೂ ಮುನ್ನ ನಡೆದಿದ್ದ ಆಸೀಸ್ ವಿರುದ್ಧ 5 ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ 4-1ರಲ್ಲಿ ಜಯ ಸಾಧಿಸಿದ್ದ ಬಾಂಗ್ಲಾದೇಶ ಇಂದಿನ ಪಂದ್ಯದಲ್ಲಿ ಆಸೀಸ್ ಬೌಲರ್ಗಳಿಗೆ ಉತ್ತರಿಸಲಾಗದೆ 15 ಓವರ್ಗಳಲ್ಲಿ ಸರ್ವಪತನ ಕಂಡಿತು. ಮೊಹಮ್ಮದ್ ನಯೀಮ್ (17), ನಾಯಕ ಮಹಮುದುಲ್ಲಾ(16) ಮತ್ತು ಶಮೀಮ್ ಹೊಸೈನ್ (19) ಮಾತ್ರ ಎರಡಂಕಿ ರನ್ಗಳಿಸಿದರು. 4 ಮಂದಿ ಸೊನ್ನೆ ಸುತ್ತಿದರೆ, ಉಳಿದ ನಾಲ್ಕು ಬ್ಯಾಟರ್ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಆ್ಯಡಂ ಜಂಪಾ 19ಕ್ಕೆ 5, ಜೋಸ್ ಹೆಜಲ್ವುಡ್ 8ಕ್ಕೆ2, ಮಿಚೆಲ್ ಸ್ಟಾರ್ಕ್ 21ಕ್ಕೆ2, ಗ್ಲೇನ್ ಮ್ಯಾಕ್ಸ್ವೆಲ್ 6ಕ್ಕೆ1 ವಿಕೆಟ್ ಪಡೆದು ಬಾಂಗ್ಲಾದೇಶ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿ ಆಸ್ಟ್ರೇಲಿಯಾಗೆ 74 ರನ್ಗಳ ಸುಲಭ ಗುರಿ ಸಿಗುವಂತೆ ಮಾಡಿದರು.
6.2 ಓವರ್ಗಳಲ್ಲೇ ಗುರಿ ತಲುಪಿದ ಆಸ್ಟ್ರೇಲಿಯಾ
74 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ 6.2 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆ್ಯರೋನ್ ಫಿಂಚ್ 20 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 40, ಡೇವಿಡ್ ವಾರ್ನರ್ 14 ಎಸೆತಗಳಲ್ಲಿ 18 ಹಾಗೂ ಮಿಚೆಲ್ ಮಾರ್ಷ್ 5 ಎಸೆತಗಳಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ ಅಜೇಯ 16 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ತಂಡ 4 ಪಂದ್ಯಗಳಲ್ಲಿ 3 ಜಯ ಮತ್ತು 1 ಸೋಲಿನೊಂದಿಗೆ ಸೂಪರ್ 12 ಮೊದಲ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ ಕೂಡ ಇಷ್ಟೇ ಅಂಕ ಹೊಂದಿದ್ದರೂ ತನ್ನ ಕೊನೆಯ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಬೃಹತ್ ಅಂತರದಿಂದ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಆಸ್ಟ್ರೇಲಿಯಾ ತನ್ನ ಕೊನೆಯ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಗೆದ್ದರೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಹೆಚ್ಚಿದೆ.
ಇದನ್ನು ಓದಿ:Syed Mushtaq Ali Trophy: ಮನೀಶ್, ಕರುಣ್ ಅಬ್ಬರ.. ಮುಂಬೈ ವಿರುದ್ಧ ಕರ್ನಾಟಕ ಜಯಭೇರಿ