ಪಲ್ಲೆಕೆಲೆ, ಶ್ರೀಲಂಕಾ: ಇಂದು ಪಲ್ಲೆಕೆಲೆಯಲ್ಲಿ ನಡೆಯಲಿರುವ ಏಷ್ಯಾ ಕಪ್ 2023 ರ ತನ್ನ ಮೊದಲ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಪಲ್ಲೆಕೆಲೆ ಸ್ಟೇಡಿಯಂನಲ್ಲಿ ನಡೆದ ಅಭ್ಯಾಸದ ಸಮಯದಲ್ಲಿ ಮೆನ್ ಇನ್ ಬ್ಲೂ ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಬೌಲರ್ ಮೊಹಮ್ಮದ್ ಸಿರಾಜ್ ಪಾಕಿಸ್ತಾನದ ಆಟಗಾರರನ್ನು ಸ್ವಾಗತಿಸಿದರು.
ಈ ಹಿಂದೆ ಟ್ವಿಟ್ಟರ್ ಎಂದು ಕರೆಯಲ್ಪಡುವ X ಸಾಮಾಜಿಕ ವೇದಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಹಂಚಿಕೊಂಡ ವಿಡಿಯೋದಲ್ಲಿ, ಕೊಹ್ಲಿ ಹ್ಯಾರಿಸ್ ರೌಫ್‌ಗೆ ಹಸ್ತಲಾಘವ ಮಾಡುವುದನ್ನು ಮತ್ತು ನೆಲದ ಮೇಲೆ ಅವರನ್ನು ತಬ್ಬಿಕೊಳ್ಳುವುದನ್ನು ಕಾಣಬಹುದಾಗಿದೆ. ಇಬ್ಬರೂ ತಮ್ಮದೇ ಆದ ತಾಲೀಮಿಗೆ ಮರಳುವ ಮೊದಲು ಕೆಲವು ನಿಮಿಷಗಳ ಕಾಲ ಮಾತನಾಡಿದರು.
ಪಲ್ಲೆಕೆಲೆಯಲ್ಲಿ ನಡೆದ ಅಭ್ಯಾಸದ ನಂತರ ಕೊಹ್ಲಿ ಶಾದಾಬ್ ಖಾನ್ ಮತ್ತು ಶಾಹೀನ್ ಅಫ್ರಿದಿ ಅವರೊಂದಿಗೆ ನಗೆ ಚಟಾಕಿ ಹಾರಿಸಿದರು. ಕೋಹ್ಲಿ ಮತ್ತು ಶಾದಾಬ್ ಅವರು ಲಘುವಾದ ಸಂಭಾಷಣೆಯಲ್ಲಿ ತೊಡಗಿಸಿಕೊಂಡಾಗ ಎಲ್ಲರೂ ನಗುತ್ತಿದ್ದರು, ನಗುತ್ತಾ ತಮಾಷೆ ಮಾಡಿದರು. ಸ್ವಲ್ಪ ಸಮಯದ ನಂತರ ಮೊಹಮ್ಮದ್ ಶಮಿ ಶಾದಾಬ್ ಅವರನ್ನು ಸ್ವಾಗತಿಸಿದರು. ನಂತರ ಅವರು ಕೊಹ್ಲಿಯೊಂದಿಗೆ ತಮ್ಮ ಮಾತುಗಳನ್ನು ಮುಂದುವರೆಸಿದರು.
ಭಾರತ ತಂಡದ ನಾಯಕ ರೋಹಿತ್ ಅವರು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮತ್ತು ಬ್ಯಾಟರ್ ಇಮಾಮ್ ಉಲ್ ಹಕ್ ಅವರೊಂದಿಗೆ ಸಂವಾದದಲ್ಲಿ ತೊಡಗಿದ್ದರು. ಶುಕ್ರವಾರ ಪಲ್ಲೆಕೆಲೆಯಲ್ಲಿ ಭಾರತ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನ ತನ್ನ ಪ್ಲೇಯಿಂಗ್ ಇಲೆವೆನ್ ಅನ್ನು ಹೆಸರಿಸಿದೆ. ಮೂರು ಸ್ಪಿನ್-ಬೌಲಿಂಗ್ ಆಲ್-ರೌಂಡರ್‌ಗಳ ಬೆಂಬಲದೊಂದಿಗೆ ಮೂರು - ಪ್ರಾಂಗ್ ವೇಗದ ದಾಳಿಯೊಂದಿಗೆ ಬಾಬರ್ ಅಜಮ್ ಅವರ 11ರ ಬಳಗ ಅಭ್ಯಾಸ ಮಾಡುತ್ತಿತ್ತು.
ಮೊದಲೆರಡು ಪಂದ್ಯಗಳಿಂದ ಕೆಎಲ್ ರಾಹುಲ್ ಹೊರಗುಳಿಯುವುದರೊಂದಿಗೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಇಶಾನ್ ಕಿಶನ್ 11ರ ಬಳಗದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ತಂಡಕ್ಕೆ ಮರಳಿರುವುದು ಬಲ ಹೆಚ್ಚಿಸಿದೆ. ಅವರೇ ತಂಡದ ಮೊದಲ ಬೌಲಿಂಗ್ ಆಯ್ಕೆಯಾಗಿದ್ದು, ಬುಮ್ರಾ ಜೊತೆ ಮೊಹಮ್ಮದ್ ಶಮಿ ಬೌಲಿಂಗ್ ಮಾಡಲಿದ್ದಾರೆ. ಮೂರನೇ ವೇಗಿಯಾಗಿ ಮೊಹಮ್ಮದ್ ಸಿರಾಜ್ಗೆ ಅವಕಾಶ ಸಿಗಲಿದೆ. ಮೂವರು ಸಹ ಪವರ್ ಪ್ಲೇನಲ್ಲಿ ರನ್ ಕಂಟ್ರೋಲ್ ಮಾಡೋದರ ಜೊತೆಗೆ ವಿಕೆಟ್‌ಗಳನ್ನು ಉರುಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಇವರೊಂದಿಗೆ ಕುಲದೀಪ್ ಯಾದವ್ ಸಹ ವಿಕೆಟ್ ಕಬಳಿಸಲು ಸಜ್ಜಾಗಿದ್ದಾರೆ.
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.
ಪಾಕಿಸ್ತಾನ ಸಂಭಾವ್ಯ ತಂಡ: ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್.
ಓದಿ: ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಅನುಭವದಡಿಯಲ್ಲಿ ಎದುರಿಸುತ್ತೇವೆ: ರೋಹಿತ್ ಶರ್ಮಾ