ದುಬೈ: ಏಷ್ಯಾ ಕಪ್ ಟಿ20 ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತದ ಗೆಲುವಿಗೆ 148 ರನ್ ಗುರಿ ನೀಡಿದೆ. 19.5 ಓವರ್ಗಳಲ್ಲಿ 147 ರನ್ಗಳಿಗೆ ಪಾಕ್ ಟೀಂ ಆಲೌಟ್ ಆಗಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅಂತೆಯೇ, ಮೊದಲು ಬ್ಯಾಟಿಂಗ್ಗೆ ಇಳಿದ ಪಾಕ್ ಆರಂಭಿಕ ಆಘಾತವನ್ನು ಅನುಭವಿಸಿತು. ಮೊದಲ ಓವರ್ನ ಎರಡನೇ ಎಸೆತದಲ್ಲೇ ಭುವನೇಶ್ವರ್ ಕುಮಾರ್ ಅವರು ಮೊಹಮ್ಮದ್ ರಿಜ್ವಾನ್ ವಿಕೆಟ್ ತೆಗೆದಿದ್ದರು. ಆದರೆ, ಇದನ್ನು ಮೂರನೇ ಅಂಪೈರ್ ನಿರ್ಧಾರ ರದ್ದುಗೊಳಿಸಿದರು.
ಮೂರನೇ ಓವರ್ನಲ್ಲಿ ಆರಂಭಿಕ ಆಟಗಾರರಾದ ಕ್ಯಾಪ್ಟನ್ ಬಬರ್ ಆಜಂ ಅವರನ್ನು ಕೇವಲ 10 ರನ್ಗಳಿಗೆ ಭುವನೇಶ್ವರ್ ಕುಮಾರ್ ಔಟ್ ಮಾಡಿದರು. 9 ಎಸೆತಗಳನ್ನು ಎದುರಿಸಿ ಎರಡು ಬೌಂಡರಿ ಬಾರಿಸಿದ್ದ ಬಬರ್ ಆಜಂ ಆರ್ಷದೀಪ್ ಸಿಂಗ್ ಕೈಗೆ ಕ್ಯಾಚ್ ಕೊಟ್ಟರು. ಈ ವೇಳೆ ಪಾಕ್ ತಂಡದ ಮೊತ್ತ 15 ರನ್ಗಳಾಗಿತ್ತು. ನಂತರ ಬಂದ ಫಖರ್ ಜಮಾನ್ ಕೂಡ ಬೇಗನೇ ಪೆವಿಲಿಯನ್ಗೆ ಮರಳಿದರು. ಜಮಾನ್ ಎರಡು ಬೌಂಡರಿಗಳೊಂದಿಗೆ 10 ರನ್ ಗಳಿಸಿದ್ದಾಗ ಆವೇಶ್ ಖಾನ್ ಬೌಲಿಂಗ್ನಲ್ಲಿ ದಿನೇಶ್ ಕಾರ್ತಿಕ್ ಕೈಗೆ ಚೆಂಡಿಟ್ಟು ಪೆವಿಲಿಯನ್ ಸೇರಿದರು.
ಫಖರ್ ಜಮಾನ್ ಬಳಿಕ ಬಂದ ಇಫ್ತಿಕಾರ್ ಅಹ್ಮದ್ ಆರಂಭಿಕರಾಗಿದ್ದ ಮೊಹಮ್ಮದ್ ರಿಜ್ವಾನ್ ಅವರಿಗೆ ಒಳ್ಳೆಯ ಜೊತೆಯಾಟ ಕೊಡಲು ಪ್ರಯತ್ನಿಸಿದರು. ರಿಜ್ವಾನ್ ಹಾಗೂ ಇಫ್ತಿಕಾರ್ ಉತ್ತಮವಾಗಿ ಆಡುತ್ತಿದ್ದಾಗಲೇ ಹಾರ್ದಿಕ್ ಪಾಂಡ್ಯ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 28 ರನ್ ಗಳಿಸಿದ್ದ ಇಫ್ತಿಕಾರ್ 12ನೇ ಓವರ್ನಲ್ಲಿ ದಿನೇಶ್ ಕಾರ್ತಿಕ್ ಕೈಗೆ ಕ್ಯಾಚ್ ಕೊಟ್ಟರು. 22 ಎಸೆತಗಳನ್ನು ಎದುರಿಸಿದ್ದ ಇಫ್ತಿಕಾರ್ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದರು. ಆಗ ಪಾಕ್ ತಂಡದ ಮೊತ್ತ 67 ರನ್ಗಳಾಗಿತ್ತು.
ಇದಾದ ಸ್ವಲ್ವ ಹೊತ್ತಿನಲ್ಲೇ ಮೊಹಮ್ಮದ್ ರಿಜ್ವಾನ್ ಅವರನ್ನೂ ಹಾರ್ದಿಕ್ ಪಾಂಡ್ಯ ಔಟ್ ಮಾಡುವ ಮೂಲಕ ಎದುರಾಳಿ ತಂಡಕ್ಕೆ ಶಾಕ್ ನೀಡಿದರು. 42 ಎಸೆತಗಳಲ್ಲಿ ನಾಲ್ವರು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದ್ದ ರಿಜ್ವಾನ್ ಆವೇಶ್ ಖಾನ್ ಕೈಗೆ ಕ್ಯಾಚ್ ಕೊಟ್ಟು ಔಟಾದರು. ಇದರ ಬೆನ್ನಲ್ಲೇ ಖುಷ್‌ದಿಲ್ ಶಾ (2) ಸಹ ಹಾರ್ದಿಕ್ ಪಾಂಡ್ಯ ಬೌಲಿಂಗ್ ಬಲೆಗೆ ಬಿದ್ದರು. ಅಲ್ಲಿಂದ ನಂತರ ಬಂದ ಯಾವ ಆಟಗಾರ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಿಲ್ಲ.
ಶಾದಾಬ್ ಖಾನ್ (10), ಆಸಿಫ್ ಅಲಿ (9), ಮೊಹಮ್ಮದ್ ನವಾಜ್ (1) ಹಾಗೂ ನಸೀಂ ಶಾ ಶೂನ್ಯಕ್ಕೆ ಔಟಾದರು. ಆದರೆ, ಕೊನೆಯಲ್ಲಿ ಹ್ಯಾರಿಸ್ ರೌಫ್ ಹಾಗೂ ಶಾನವಾಜ್ ದಹಾನಿ ಬಿರುಸಿನಿಂದ ಬ್ಯಾಟ್ ಬೀಸಿದರು. 6 ಬಾಲ್ಗಳಲ್ಲಿ ಶಾನವಾಜ್ ದಹಾನಿ ಎರಡು ಸಿಕ್ಸರ್ ಬಾರಿಸಿದರು ಮತ್ತು ಅಜೇಯರಾಗಿ ಉಳಿದ ಹ್ಯಾರಿಸ್ ರೌಫ್ 7 ಎಸೆತಗಳಲ್ಲಿ ಎರಡು ಬೌಂಡರಿಗಳನ್ನು ಬಾರಿಸಿ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು.
ಭಾರತದ ಪರವಾಗಿ ಭುವನೇಶ್ವರ್ ಕುಮಾರ್-4, ಹಾರ್ದಿಕ್ ಪಾಂಡ್ಯ-3 ಮತ್ತು ಆವೇಶ್ ಖಾನ್-1, ಅರ್ಷದೀಪ್ ಸಿಂಗ್ -2 ವಿಕೆಟ್ ಕಿತ್ತು ಮಿಂಚಿದರು.