ದುಬೈ(ಯುಎಇ): ಏಷ್ಯಾ ಕಪ್ ಸೂಪರ್ 4 ಹಂತದ 'ಮಾಡು ಇಲ್ಲವೇ ಮಡಿ' ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿರುವ ಟೀಂ ಇಂಡಿಯಾ ಫೈನಲ್ನಿಂದ ಬಹುತೇಕ ಹೊರಬಿದ್ದಿದೆ. ಆದರೆ, ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಪವಾಡ ನಡೆದರೆ, ರೋಹಿತ್ ಸಾರಥ್ಯದ ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯುವ ಅವಕಾಶ ಗಿಟ್ಟಿಸಿಕೊಳ್ಳಬಹುದು.
ಏಷ್ಯಾ ಕಪ್ ಸೂಪರ್ 4 ಹಂತದಲ್ಲಿ ಟೀಂ ಇಂಡಿಯಾ ನಾಳೆ ಅಫ್ಘಾನಿಸ್ತಾನದ ಸವಾಲು ಎದುರಿಸಲಿದೆ. ಈ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡುವುದು ಭಾರತದ ಮುಂದಿರುವ ಮೊದಲ ಸವಾಲು. ಉಳಿದಂತೆ, ಇತರೆ ತಂಡಗಳ ಫಲಿತಾಂಶದ ಮೇಲೆ ಭಾರತದ ಭವಿಷ್ಯ ಅಡಗಿದೆ.
ಇದನ್ನೂ ಓದಿ: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಶ್ರೀಲಂಕಾ: ಭಾರತದ ಏಷ್ಯಾ ಕಪ್ ಫೈನಲ್ ಹಾದಿ ಕಠಿಣ
ಹೀಗಾದ್ರೆ ಮಾತ್ರ ಟೀಂ ಇಂಡಿಯಾ ಫೈನಲ್‌ಗೆ:
- ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು ದಾಖಲಿಸಬೇಕು.
- ಪಾಕಿಸ್ತಾನ ತಂಡ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ವಿರುದ್ಧ ಸೋಲು ಅನುಭವಿಸಬೇಕು.
ಈ ಎರಡೂ ಪವಾಡಗಳು ನಡೆದಾಗ ಮಾತ್ರ ಟೀಂ ಇಂಡಿಯಾ ನೆಟ್ ರನ್ರೇಟ್ ಆಧಾರದ ಮೇಲೆ ಮುಂದಿನ ಹಂತಕ್ಕೆ ತಲುಪುವ ಸಾಧ್ಯತೆ ಇದೆ.
ಪಾಕಿಸ್ತಾನ ಮುಂದಿನ ಎರಡು ಪಂದ್ಯಗಳಲ್ಲಿ ಸೋಲುಂಡಾಗ ಪಾಯಿಂಟ್ ಸಮಗೊಳ್ಳಲಿದ್ದು, ಉತ್ತಮ ರನ್ರೇಟ್ ಗಳಿಸಿದ್ರೆ ಭಾರತದ ಫೈನಲ್ ಹಾದಿ ಸುಗಮ ಆಗಬಹುದು. ಒಂದು ವೇಳೆ ಪಾಕ್ ತಂಡ ಮುಂದಿನ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದರೂ, ಭಾರತ ಏಷ್ಯಾ ಕಪ್ನಿಂದ ಅಧಿಕೃತವಾಗಿ ಹೊರಬೀಳಲಿದೆ.