ಮುಂಬೈ : ಶ್ರೀಲಂಕಾದಲ್ಲಿ ಇದೇ ಜುಲೈನಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಕೋವಿಡ್-19 ಏರಿಕೆಯ ಕಾರಣದಿಂದ ರದ್ದುಗೊಳಿಸುವುದಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಕಳೆದ ವಾರ ತಿಳಿಸಿತ್ತು. ಇದೀಗ 2023ಕ್ಕೆ ಮುಂದೂಡಲಾಗಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧಿಕೃತವಾಗಿ ಘೋಷಿಸಿದೆ.
ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾಗುವ ಅಪಾಯಗಳು ಮತ್ತು ನಿರ್ಬಂಧಗಳ ಹಿನ್ನೆಲೆ ಏಷ್ಯಾ ಕಪ್ 2020 ರಿಂದ 2021ಕ್ಕೆ ಮುಂದೂಡಲ್ಪಟ್ಟಿದ್ದ ಏಷ್ಯಾ ಕಪ್ ಮತ್ತೆ ಮುಂದೂಡಿರುವುದಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೆ ಈಗಾಗಲೇ ಬಿಡುವಿಲ್ಲದ ವೇಳಾಪಟ್ಟಿ ನಿಗದಿಯಾಗಿರುವುದರಿಂದ ಹಾಗೂ 2022ಕ್ಕೆ ಮತ್ತೊಂದು ಏಷ್ಯಾಕಪ್ ನಡೆಯುವುದರಿಂದ 2020 ಏಷ್ಯಾಕಪ್ ಅನಿವಾರ್ಯವಾಗಿ 2023ಕ್ಕೆ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಈ ವರ್ಷವೂ ಏಷ್ಯಾಕಪ್ ಮುಂದೂಡಲ್ಪಟ್ಟಿರುವುದರಿಂದ 2022ರ ಬಹುರಾಷ್ಟ್ರಗಳ ಟೂರ್ನಿಯನ್ನು ಆಯೋಜಿಸುವ ಹಕ್ಕು ಮತ್ತೆ ಪಾಕಿಸ್ತಾನ ಪಾಲಾಗಿದೆ. 2023ರ ಆವೃತ್ತಿ ಶ್ರೀಲಂಕಾದಲ್ಲಿ ನಡೆಯಲಿದೆ.
ಪಾಕಿಸ್ತಾನ 2008ರಲ್ಲಿ ಮತ್ತು ಶ್ರೀಲಂಕಾ 2010ರಲ್ಲಿ ಕೊನೆಯ ಬಾರಿ ಟೂರ್ನಿ ಆಯೋಜಿಸಿದ್ದವು. ನಂತರದ ಮೂರು ಆವೃತ್ತಿಗಳು ಬಾಂಗ್ಲಾದೇಶದಲ್ಲಿ ಆಯೋಜನೆಯಾಗಿದ್ದವು.
2018ರ ಆವೃತ್ತಿ ಯುಎಇಯಲ್ಲಿ ನಡೆದಿತ್ತು. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಗೆಲುವು ಸಾಧಿಸಿತ್ತು. ಒಟ್ಟು 14 ಏಷ್ಯಾಕಪ್ ಟೂರ್ನಿ ನಡೆದಿದ್ದು ಭಾರತ 7 ಬಾರಿ, ಶ್ರೀಲಂಕಾ 5 ಮತ್ತು ಪಾಕಿಸ್ತಾನ 2 ಬಾರಿ ಚಾಂಪಿಯನ್ ಆಗಿವೆ.
ಇದನ್ನು ಓದಿ:2022ರ ಏಷ್ಯಾಕಪ್ ಪಾಕಿಸ್ತಾನದಲ್ಲಿ.. ಭಾಗವಹಿಸುವುದೇ ಭಾರತ ತಂಡ?