ಅಡಿಲೇಡ್ : ಮೊದಲ ಪಂದ್ಯದಲ್ಲಿ ಸೋಲುಂಡರೂ ಮತ್ತೆ ತಿರುಗಿಬಿದ್ದು 2-1ರಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದದ್ದನ್ನು ಉದಾಹರಣೆಯನ್ನಾಗಿ ನೀಡಿರುವ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್, ತಮ್ಮ ತಂಡ ಕೂಡ ತಿರುಗಿ ಬೀಳಬೇಕು ಎಂದು ಅಡಿಲೇಡ್ನಲ್ಲಿ ನಡೆಯಲಿರುವ 2ನೇ ಟೆಸ್ಟ್ಗೂ ಮುನ್ನ ಹೇಳಿದ್ದಾರೆ.
ಪ್ರಸ್ತುತ ಇಂಗ್ಲೆಂಡ್ ತಂಡ ಬ್ರಿಸ್ಬೇನ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಸೋಲು ಕಾಣುವ ಮೂಲಕ 0-1ರಲ್ಲಿ ಹಿನ್ನಡೆ ಅನುಭವಿಸಿದೆ. ಗುರುವಾರದಿಂದ ಅಡಿಲೇಡ್ನಲ್ಲಿ 2ನೇ ಪಂದ್ಯವನ್ನು ಆಡಲಿದೆ. ಈ ಪಂದ್ಯ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯವಾಗಿದೆ.
ಭಾರತ 36 ರನ್ಗಳಿಗೆ ಆಲೌಟ್ ಆಗಿ ಸೋಲುಂಡಿತ್ತು. ಆದರೆ, ಅದ್ಭುತವಾಗಿ ಕಮ್ಬ್ಯಾಕ್ ಮಾಡಿ ಸರಣಿ ಗೆದ್ದಿತ್ತು. ಆದ್ದರಿಂದ ನಮ್ಮಿಂದಲೂ ಇದು ಸಾಧ್ಯವಿದೆ. ಇದೀಗ ನಾವು ಕಠಿಣ ಪರಿಶ್ರಮ ಪಟ್ಟು ನಮ್ಮ ಸುತ್ತವಿರುವ ವಿಷಯಗಳನ್ನು ತಿಳಿಯಬೇಕಿದೆ ಮತ್ತು ಬ್ಯಾಟಿಂಗ್ನಲ್ಲಿ ನಾವು ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ ಎಂದು ದಿ ಟೆಲಿಗ್ರಾಫ್ಗೆ ಬರೆದಿರುವ ಲೇಖನದಲ್ಲಿ ಆ್ಯಂಡರ್ಸನ್ ಉಲ್ಲೇಖಿಸಿದ್ದಾರೆ.
ಬ್ರಿಸ್ಬೇನ್ನಲ್ಲಿ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೆ, ಮತ್ತೆ ಅದೇ ಯೋಚನೆಯಲ್ಲಿರುವವರಿಗೆ, ಈ ಬಾರಿ ವಿಭಿನ್ನವಾಗಿರಲಿದೆ ಎಂಬುದನ್ನ ಮಾತ್ರ ಹೇಳುತ್ತೇನೆ. ಆಸ್ಟ್ರೇಲಿಯಾಕ್ಕೆ ಹಿಂದೆ ತೆರಳಿದ್ದ ತಂಡಕ್ಕಿಂತ ಸಮರ್ಥವಾದ ತಂಡವನ್ನು ಹೊಂದಿದ್ದೇವೆ. ನಾವು ಅದ್ಭುತವಾದ ಗುಂಪನ್ನು ಹೊಂದಿದ್ದೇವೆ.
ನಾವು ಏನನ್ನು ಸಾಧಿಸಲು ಹೊರಟಿದ್ದೇವೆ ಎನ್ನುವುದು ನಮಗೆ ಗೊತ್ತಿದೆ. ತಂಡದಲ್ಲಿ ತಮ್ಮ ಜವಾಬ್ದಾರಿ ಏನು ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಜೊತೆಗೆ ಆಸ್ಟ್ರೇಲಿಯಾ ತಂಡವನ್ನು ಸೋಲಿಸಬಹುದು ಎನ್ನುವುದೂ ನಮಗೆ ಗೊತ್ತಿದೆ ಎಂದು 39 ವರ್ಷದ ವೇಗಿ ತಿಳಿಸಿದ್ದಾರೆ.
ಇದನ್ನೂ ಓದಿ:ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆಡಲಿದ್ದೇನೆ : ಗೊಂದಲಕ್ಕೆ ತೆರೆ ಎಳೆದ ವಿರಾಟ್ ಕೊಹ್ಲಿ