ಲೀಡ್ಸ್: ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಆಕರ್ಷಕ ಅರ್ಧಶತಕ (75) ಹಾಗೂ ಆಲ್ರೌಂಡರ್ ಕ್ರಿಸ್ ವೋಕ್ಸ್ (32) ಅಜೇಯ ಆಟದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ದ ಇಂಗ್ಲೆಂಡ್ ತಂಡವು 3 ವಿಕೆಟ್ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಈ ಬಾರಿಯ ಆ್ಯಶಸ್ ಸರಣಿಯಲ್ಲಿ ಮೊದಲ ಜಯ ದಾಖಲಿಸಿದ್ದು, 1-2ರ ಅಂತರ ಸಾಧಿಸಿದೆ.
251 ರನ್ ಗೆಲುವಿನ ಗುರಿ ಪಡೆದ ಇಂಗ್ಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿತ್ತು. ಹೀಗಾಗಿ ಆಂಗ್ಲರ ಗೆಲುವಿಗೆ ಇನ್ನೂ 224 ರನ್ ಅಗತ್ಯವಿತ್ತು. ನಾಲ್ಕನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ಗೆ ವೇಗಿ ಮಿಚೆಲ್ ಸ್ಟಾರ್ಕ್ ಮೊದಲ ವಿಕೆಟ್ ಕಿತ್ತು ಶಾಕ್ ನೀಡಿದರು. 23 ರನ್ ಗಳಿಸಿದ್ದ ಬೆನ್ ಡಕೆಟ್ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಬಳಿಕ ಬಂದ ಮೋಯಿನ್ ಅಲಿ ಕೂಡ ಕೇವಲ 5 ರನ್ಗೆ ಸ್ಟಾರ್ಕ್ ಎಸೆತದಲ್ಲಿ ಬೌಲ್ಡ್ ಆದರು.
-
❤️ The match-winning moment...
— England Cricket (@englandcricket) July 9, 2023 " class="align-text-top noRightClick twitterSection" data="
Chris Woakes, what a man 👏 #EnglandCricket | #Ashes pic.twitter.com/hnhvEMu0jR
">❤️ The match-winning moment...
— England Cricket (@englandcricket) July 9, 2023
Chris Woakes, what a man 👏 #EnglandCricket | #Ashes pic.twitter.com/hnhvEMu0jR❤️ The match-winning moment...
— England Cricket (@englandcricket) July 9, 2023
Chris Woakes, what a man 👏 #EnglandCricket | #Ashes pic.twitter.com/hnhvEMu0jR
ನಂತರ ಮತ್ತೊಬ್ಬ ಆರಂಭಿಕ ಆಟಗಾರ ಜಾಕ್ ಕ್ರಾವ್ಲಿ ಜೊತೆಗೂಡಿದ ಅನುಭವಿ ಆಟಗಾರ ಜೋ ರೂಟ್ ಉತ್ತಮ ಜೊತೆಯಾಟದ ಭರವಸೆ ಮೂಡಿಸಿದ್ದರು. ಆದರೆ 44 ರನ್ ಬಾರಿಸಿದ್ದ ಕ್ರಾವ್ಲಿ ಮಿಚೆಲ್ ಮಾರ್ಷ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ನೀಡಿ ಹೊರ ನಡೆದರು. ತದನಂತರ ಹ್ಯಾರಿ ಬ್ರೂಕ್ ಜೊತೆ ಸೇರಿಕೊಂಡು ತಂಡದ ಮೊತ್ತವನ್ನು 131ಕ್ಕೆ ಕೊಂಡೊಯ್ದ ರೂಟ್ ಕಮಿನ್ಸ್ ಎಸೆತದಲ್ಲಿ ಔಟಾಗುವ ಮೂಲಕ ಆಸೀಸ್ಗೆ ಗೆಲುವಿನ ಆಸೆ ಚಿಗುರಿತ್ತು. ಈ ನಡುವೆ 13 ರನ್ ಬಾರಿಸಿದ್ದ ನಾಯಕ ಬೆನ್ ಸ್ಟೋಕ್ಸ್ ಕೂಡ ಸ್ಟಾರ್ಕ್ ಓವರ್ನಲ್ಲಿ ಕ್ಯಾರಿಗೆ ಕ್ಯಾಚಿತ್ತು ಹೊರನಡೆದರು. ಅಲ್ಲದೆ, ಜಾನಿ ಬೈರ್ಸ್ಟೋ ಕೂಡ 5 ರನ್ಗೆ ಪೆವಿಲಿಯನ್ ಸೇರಿದ್ದರಿಂದ ಇಂಗ್ಲೆಂಡ್ 171 ರನ್ಗೆ 6 ವಿಕೆಟ್ ಕಳೆದುಕೊಂಡಿದ್ದಲ್ಲದೆ, ಆಸೀಸ್ ಆಟಗಾರರಿಗೆ ಗೆಲುವಿನ ವಿಶ್ವಾಸ ಮೂಡಿತ್ತು.
ಆದರೆ, ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಆತ್ಮವಿಶ್ವಾಸದ ಬ್ಯಾಟಿಂಗ್ ಪ್ರದರ್ಶಿಸಿದ ಯುವ ಆಟಗಾರ ಹ್ಯಾರಿ ಬ್ರೂಕ್ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 93 ಎಸೆತಗಳಲ್ಲಿ 75 ರನ್ ಬಾರಿಸಿದ ಬ್ರೂಕ್ ಕ್ರಿಸ್ ವೋಕ್ಸ್ ಜೊತೆಗೂಡಿ 7ನೇ ವಿಕೆಟ್ಗೆ 59 ರನ್ಗಳ ಅಮೂಲ್ಯ ಜೊತೆಯಾಟ ಆಡಿದರು. ತಂಡವು ಗೆಲುವಿನ ಸನಿಹದಲ್ಲಿದ್ದಾಗ ಸ್ಟಾರ್ಕ್ ಬೌಲಿಂಗ್ನಲ್ಲಿ ಯಡವಟ್ಟು ಮಾಡಿಕೊಂಡ ಬ್ರೂಕ್ ಕಮಿನ್ಸ್ಗೆ ಕ್ಯಾಚ್ ನೀಡಿದರು.
ಇದರಿಂದ ಟೆಸ್ಟ್ ಪಂದ್ಯಕ್ಕೆ ಮತ್ತೆ ತಿರುವು ಸಿಗುವ ಲಕ್ಷಣಗಳು ಕಂಡುಬಂದರೂ ಸಹ ಬಳಿಕ ಕ್ರೀಸ್ಗಿಳಿದ ಮಾರ್ಕ್ ವುಡ್ ತಲಾ ಒಂದು ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ 8 ಎಸೆತಗಳಲ್ಲಿ 16 ರನ್ ಬಾರಿಸಿ ಕಾಂಗರೂ ಪಡೆಯಿಂದ ಗೆಲುವು ಕಿತ್ತುಕೊಂಡರು. ಇನ್ನೊಂದೆಡೆ ಅಜೇಯ 32 ರನ್ ಬಾರಿಸಿದ ವೋಕ್ಸ್ ಬೌಂಡರಿ ಚಚ್ಚುವ ಮೂಲಕ ಆಂಗ್ಲ ತಂಡವನ್ನು ಗೆಲುವಿನ ದಡ ಸೇರಿಸಿ ಸಂಭ್ರಮಿಸಿದರು. ಆಸೀಸ್ ಪರ ಮಿಚೆಲ್ ಸ್ಟಾರ್ಕ್ 5 ವಿಕೆಟ್ ಕಬಳಿಸಿ ಮಿಂಚಿದರು. ಎರಡೂ ಇನ್ನಿಂಗ್ಸ್ಗಳಿಂದ 7 ವಿಕೆಟ್ ಹಾಗೂ 42 ರನ್ ಬಾರಿಸಿದ ವೇಗದ ಬೌಲರ್ ಮಾರ್ಕ್ ವುಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಈ ಗೆಲುವಿನೊಂದಿಗೆ ಸರಣಿಯ ಮೊದಲೆರಡು ಟೆಸ್ಟ್ ಸೋತ ಇಂಗ್ಲೆಂಡ್ ತಂಡ ಮತ್ತೆ ಲಯಕ್ಕೆ ಮರಳಿದೆ. ಎಡ್ಜ್ಬಾಸ್ಟನ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 2 ವಿಕೆಟ್ ಹಾಗೂ ಲಾರ್ಡ್ಸ್ ಟೆಸ್ಟ್ನಲ್ಲಿ 43 ರನ್ ಅಂತರದ ಸೋಲುಂಡ ಆಂಗ್ಲರು ಇದೀಗ ಲೀಡ್ಸ್ನಲ್ಲಿ ಜಯ ದಾಖಲಿಸಿ ಸರಣಿಯ ರೋಚಕತೆ ಹೆಚ್ಚಿಸಿದ್ದಾರೆ. ಮುಂದಿನ ಟೆಸ್ಟ್ ಪಂದ್ಯವು ಜುಲೈ 19ರಿಂದ ಮ್ಯಾಂಚೆಸ್ಟರ್ನಲ್ಲಿ ಆರಂಭವಾಗಲಿದೆ.
ಇದನ್ನೂ ಓದಿ: Ashes 3rd Test: ಆ್ಯಶಸ್ 3ನೇ ಟೆಸ್ಟ್ ಪಂದ್ಯ: 4 ವರ್ಷಗಳ ನಂತರ ಟೆಸ್ಟ್ಗೆ ಮರಳಿದ ಮಾರ್ಷ್ ಆಲ್ರೌಂಡ್ ಪ್ರದರ್ಶನ