ನವದೆಹಲಿ: ಕೋವಿಡ್ 19 ಭೀತಿಯಿಂದ ಮುಂದೂಡಲ್ಪಟ್ಟಿದ್ದ ಸಿಕೆ ನಾಯ್ಡು ಟ್ರೋಫಿ ಮತ್ತು ಸೀನಿಯರ್ ಮಹಿಳಾ ಟಿ-20 ಟೂರ್ನಮೆಂಟ್ ಪುನಾರಂಭ ಮಾಡುವುದರ ಕುರಿತು ಮಾರ್ಚ್ 2ರಂದು ನಡೆಯಲಿರುವ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆಯಿದೆ. ಇದೇ ಸಂದರ್ಭದಲ್ಲಿ ಮುಂಬರುವ 2023ರ ಏಕದಿನ ವಿಶ್ವಕಪ್ಗೆ ಸ್ಥಳೀಯ ಸಂಘಟನಾ ಸಮಿತಿ( Local Organising Committee)ಯನ್ನು ರಚಿಸುವ ಸಾಧ್ಯತೆ ಕೂಡ ಇದೆ.
25 ವರ್ಷದ ಒಳಗಿನ ಕ್ರಿಕೆಟಿಗರಿಗಾಗಿ ಬಿಸಿಸಿಐ ಆಯೋಜಿಸುವ ಟೂರ್ನಮೆಂಟ್ ಸಿಕೆ ನಾಯ್ಡು ಟ್ರೋಫಿ ಮತ್ತು ಸೀನಿಯರ್ ಮಹಿಳಾ ಟಿ20 ಟೂರ್ನಮೆಂಟ್ ಕೋವಿಡ್ ಭೀತಿಯ ಕಾರಣ ಕಳೆದ ತಿಂಗಳು ಮುಂಡೂಲ್ಪಟ್ಟಿತ್ತು. ರಣಜಿ ಟ್ರೋಫಿ ಕೂಡ ಮುಂದೂಡಲ್ಪಟ್ಟಿತ್ತಾದರೂ, ಬಿಸಿಸಿಐ ಎರಡು ಹಂತದಲ್ಲಿ ಟೂರ್ನಮೆಂಟ್ ನಡೆಸಲು ನಿರ್ಧರಿಸಿ ಫೆಬ್ರವರಿ 17ರಿಂದ ಚಾಲನೆ ನೀಡಿದೆ. ಈಗಾಗಲೇ ಒಂದು ಸುತ್ತಿನ ಪಂದ್ಯಗಳ ಯಶಸ್ವಿಯಾಗಿ ನಡೆದಿವೆ.
ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಒಟ್ಟು 14 ಅಂಶಗಳ ಕಾರ್ಯಕ್ರಮಗಳಿರಲಿದ್ದು, ಇದರಲ್ಲಿ ಈ ಎರಡೂ ಟೂರ್ನಮೆಂಟ್ಗಳನ್ನು ಆಯೋಜಿಸುವುದು ಪ್ರಮುಖ ಅಂಶಗಳಾಗಿವೆ. ಇದೇ ಸಂದರ್ಭದಲ್ಲಿ ದೀರಜ್ ಮೆಲ್ಹೋತ್ರಾ ಅವರಿಂದ ತೆರವಾಗಿರುವ ಜಿಎಂ(ಗೇಮ್ ಡೆವೆಲಪ್ಮೆಂಟ್) ಸ್ಥಾನಕ್ಕೆ ನೂತನ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದು ತಿಳಿದು ಬಂದಿದೆ. ಭಾರತ ತಂಡದ ಪ್ರಾಯೋಜಕರಾಗಿರುವ ಬೈಜೂಸ್ ಒಪ್ಪಂದ ಮಾರ್ಚ್ 31ಕ್ಕೆ ಅಂತ್ಯವಾಗಲಿದ್ದು, ಇದರ ಬಗ್ಗೆಯೂ ಚರ್ಚೆ ಸಾಗಲಿದೆ. 2019ರಲ್ಲಿ ಬೈಜೂಸ್ ಟೀಮ್ ಸ್ಪಾನ್ಸರ್ ಪಡೆದುಕೊಂಡಿತ್ತು.
ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ಕೇಂದ್ರಿಯ ಗುತ್ತಿಗೆಯನ್ನು ಕೂಡ ಇದೇ ಸಂದರ್ಭದಲ್ಲಿ ನಿರ್ಧರಿಸಲಾಗುತ್ತದೆ. ರಾಜ್ಯ ಕ್ರಿಕೆಟ್ ಸಂಘಗಳಿಗೆ ಆತಿಥ್ಯ ಶುಲ್ಕ ಹೆಚ್ಚಳವು ಕೂಡ ಕಾರ್ಯಸೂಚಿಯಲ್ಲಿದೆ ಮತ್ತು ಸಭೆಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರೀಡಾ ವಿಜ್ಞಾನ ಮುಖ್ಯಸ್ಥರ ನೇಮಕ ಮಾಡಲಾಗುತ್ತದೆ.
ಇದನ್ನೂ ಓದಿ:ಸಾಹಾ ಹೇಳಿಕೆಯಿಂದ ನೋವಾಗಿಲ್ಲ, ಅವರ ಮೇಲೆ ಅಪಾರ ಗೌರವವಿದೆ: ರಾಹುಲ್ ದ್ರಾವಿಡ್