ಕಾನ್ಪುರ : ಭಾರತ ತಂಡದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಮೊದಲ ಟೆಸ್ಟ್ನ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆಯುವ ಮೂಲಕ ತಾವಾಡಿದ ವೃತ್ತಿ ಜೀವನದ ಮೊದಲ 4 ಪಂದ್ಯಗಳಲ್ಲೇ 5ನೇ ಬಾರಿ 5 ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ.
ಇದೇ ವರ್ಷ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಅವರು, ಮೊದಲ ಪಂದ್ಯದಲ್ಲೇ 7 ವಿಕೆಟ್ ಪಡೆದು ಮಿಂಚಿದ್ದರು. ನಂತರ ಉಳಿದ ಮೂರು ಪಂದ್ಯಗಳಲ್ಲೂ ಒಟ್ಟು 4 ಬಾರಿ 5 ವಿಕೆಟ್ ಸಾಧನೆ ಮಾಡಿದ್ದರು.
ಇದೀಗ ತಮ್ಮ 4ನೇ ಟೆಸ್ಟ್ ಪಂದ್ಯದಲ್ಲೂ ಅಕ್ಷರ್ ಕಿವೀಸ್ನ ಐವರು ಬ್ಯಾಟರ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ. ಈ ಮೂಲಕ ಆರಂಭದ 4 ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ ಬಾರಿ 5 ವಿಕೆಟ್ ಪಡೆದ ದಾಖಲೆಯನ್ನು ಇಂಗ್ಲೆಂಡ್ ಟಾಮ್ ರಿಚರ್ಡ್ಸನ್ ಮತ್ತು ಆಸ್ಟ್ರೇಲಿಯಾದ ರಾಡ್ನಿ ಹಾಗ್ ಜೊತೆಗೆ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ವೇಗದ ಬೌಲರ್ ಚಾರ್ಲಿ ಟರ್ನರ್ ತಮ್ಮ ಮೊದಲ 4 ಪಂದ್ಯಗಳಲ್ಲಿ 6 ಬಾರಿ 5 ವಿಕೆಟ್ ಸಾಧನೆ ಮಾಡಿದ ದಾಖಲೆ ಹೊಂದಿದ್ದಾರೆ. ಭಾರತೀಯರಲ್ಲಿ ಲಕ್ಷ್ಮಣ್ ಶಿವರಾಮಕೃಷ್ಣನ್ ಮತ್ತು ನರೇಂದ್ರ ಹಿರ್ವಾನಿ ತಲಾ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ಲೋಕದ ಕರಾಳ ದಿನಕ್ಕೆ 7 ವರ್ಷ: ಪಿಲಿಫ್ ಹ್ಯೂಸ್ ನೆನೆದ ಕ್ರಿಕೆಟ್ ಅಭಿಮಾನಿಗಳು