ಲಾಹೋರ್ (ಪಾಕಿಸ್ಥಾನ): ಕಾಬೂಲ್‌ನಲ್ಲಿ ವಿಮಾನ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು ಮುಂದಿನ ತಿಂಗಳು ನಡೆಯಬೇಕಿದ್ದ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಮುಂದೂಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ದೃಢಪಡಿಸಿದೆ.
ಏಕದಿನ ಸರಣಿಯನ್ನು ಮುಂದೂಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಪರಸ್ಪರ ಒಪ್ಪಿಕೊಂಡಿದ್ದು, ಸೆಪ್ಟೆಂಬರ್ 1 ರಿಂದ 8ರ ವರೆಗೆ ಆಯೋಜಿಸಲಾಗಿದ್ದ ಸರಣಿಯನ್ನು 2022ಕ್ಕೆ ಮರು ನಿಗದಿಪಡಿಸಲಾಗುವುದು ಎಂದು ಪಿಸಿಬಿ ತಿಳಿಸಿದೆ.
ನಾವು ಅಫ್ಘಾನಿಸ್ತಾನದ ಪರಿಸ್ಥಿತಿ-ಸವಾಲುಗಳು ಹಾಗೂ ಆಟಗಾರರ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇವೆ. ಹೀಗಾಗಿಯೇ 2022ಕ್ಕೆ ಸರಣಿ ನಡೆಸಲು ಒಪ್ಪಿಕೊಂಡಿದ್ದೇವೆ. ಎಸಿಬಿ ಜೊತೆ ಪಿಸಿಬಿ ಉತ್ತಮ ಸಂಬಂಧ ಹೊಂದಿದೆ ಎಂದು ಪಿಸಿಬಿ ನಿರ್ದೇಶಕ ಜಾಕೀರ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ಗೆ ಬೆಂಬಲ ಸೂಚಿಸಿದ ತಾಲಿಬಾನ್.. ಟಿ20 ವಿಶ್ವಕಪ್ನಲ್ಲಿ ಆಡಲಿದೆ ಅಫ್ಘಾನಿಸ್ತಾನ್..
ಆಗಸ್ಟ್ 15ರಂದು ತಾಲಿಬಾನ್ ಉಗ್ರರು ಇಡೀ ಅಫ್ಘಾನಿಸ್ತಾನವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದು, ಅಲ್ಲಿನ ಸಂಪೂರ್ಣ ಚಿತ್ರಣ ಬದಲಾಗಿದೆ. ಇದರ ಬೆನ್ನಲ್ಲೇ ಮೊನ್ನೆ ಭಾನುವಾರ ಅಜೀಜುಲ್ಲಾ ಫಜ್ಲಿ ಅವರನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅಜೀಜುಲ್ಲಾ ಫಜ್ಲಿ ಅವರು 2018ರಿಂದ 2019ರ ಜುಲೈವರೆಗೆ ಎಸಿಬಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಈಗೀಗ ವಿಶ್ವದ ಟಾಪ್ ತಂಡಗಳೊಡನೆ ಗುರುತಿಸಿಕೊಳ್ಳುತ್ತಿದ್ದ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ತಾಲಿಬಾನ್ ತಿಳಿಸಿದೆ ಎನ್ನಲಾಗಿದೆ.