ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸದಿಂದಾಗಿ ಎಲ್ಲವೂ ಅಲ್ಲೋಲ - ಕಲ್ಲೋಲವಾಗಿದೆ. ಆಫ್ಘನ್ ಮೇಲೆ ಈಗಾಗಲೇ ತಾಲಿಬಾನಿಗಳು ಸಂಪೂರ್ಣವಾಗಿ ಹಿಡಿತ ಸಾಧಿಸಿದ್ದು, ಕೆಲವೇ ದಿನಗಳಲ್ಲಿ ನೂತನ ಸರ್ಕಾರ ರಚನೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಇದರ ಮಧ್ಯೆ ಬೇರೆ ಬೇರೆ ದೇಶಗಳ ಮೇಲೂ ಇದರ ಪರಿಣಾಮ ಬೀರಲು ಶುರುವಾಗಿದೆ. ಈಗಾಗಲೇ ಕೆಲವೊಂದು ದೇಶಗಳು ಬಾಂಧವ್ಯ ಕಡಿದುಕೊಂಡಿವೆ.
ಸದ್ಯ ಭಾರತದಲ್ಲಿ ವಾಸವಾಗಿರುವ ಖ್ಯಾತ ನಟಿಯೊಬ್ಬರು ಅಲ್ಲಿನ ಕ್ರಿಕೆಟರ್ ಜೊತೆಗಿನ ಮದುವೆ ಮುರಿದುಕೊಳ್ಳಲು ಮುಂದಾಗಿದ್ದಾಗಿ ತಿಳಿದು ಬಂದಿದೆ. ಬಿಗ್ ಬಾಸ್ 11ರ ಸ್ಪರ್ಧಿ ಹಾಗೂ ವಿವಿಧ ಧಾರಾವಾಹಿಗಳಲ್ಲಿ ನಟನೆ ಮಾಡಿದ್ದ ಅರ್ಶಿ ಖಾನ್ ಇದೀಗ ಈ ನಿರ್ಧಾರ ಕೈಗೊಂಡಿದ್ದು, ತಮ್ಮ ಗೋಳು ಹೊರಹಾಕಿದ್ದಾರೆ.
ಎಲ್ಲವೂ ಸರಿಯಾಗಿದ್ದರೆ ಅಕ್ಟೋಬರ್ ತಿಂಗಳಲ್ಲಿ ಅರ್ಶಿ ಖಾನ್ ಅಫ್ಘಾನ್ ಕ್ರಿಕೆಟರ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಬೇಕಾಗಿತ್ತು. ಆದರೆ, ಅಲ್ಲಿನ ಪರಿಸ್ಥಿತಿ ಗಂಭೀರವಾಗಿರುವ ಕಾರಣ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿದು ಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಟಿ, ಅಫ್ಘನ್ ಕ್ರಿಕೆಟರ್ ನಮ್ಮ ತಂದೆಯ ಸ್ನೇಹಿತನ ಮಗನಾಗಿದ್ದು, ನಮ್ಮ ಕುಟುಂಬಸ್ಥರು ಅಲ್ಲೇ ವಾಸವಾಗಿದ್ದ ಕಾರಣ ಆತನೊಂದಿಗೆ ಮದುವೆ ಮಾಡಿಸಬೇಕೆಂದು ನಿರ್ಧಾರ ಮಾಡಿದ್ದರು. ಆದರೆ, ಪರಿಸ್ಥಿತಿ ಕೈಮೀರಿ ಹೋಗಿರುವ ಕಾರಣ ಇದೀಗ ಭಾರತೀಯ ಹುಡುಗನ ಹುಡುಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಹಿಂದಿ ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ನಟನೆ ಮಾಡಿರುವ ಅರ್ಶಿ ಖಾನ್ ಈಗಾಗಲೇ ಫೇಮಸ್ ಆಗಿದ್ದು, ಬಿಗ್ ಬಾಸ್ ಸೀಸನ್ 11ರಲ್ಲೂ ಭಾಗಿಯಾಗಿದ್ದರು. ಇದರ ಮಧ್ಯೆ ಅಲ್ಲಿನ ಕ್ರಿಕೆಟರ್ ಜೊತೆ ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದರು. ಆದರೆ, ಇದೀಗ ಮುರಿದು ಬೀಳುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ.