ಜೋಹಾನ್ಸ್‌ಬರ್ಗ್: ಗ್ರೇಮ್ ಸ್ಮಿತ್, ಮಾರ್ಕ್ ಬೌಷರ್ ಮತ್ತು ಎ ಬಿ ಡಿವಿಲಿಯರ್ಸ್‌ನಂತಹ ಕೆಲವು ದಕ್ಷಿಣ ಆಫ್ರಿಕಾದ ಅಗ್ರ ಮಾಜಿ ಆಟಗಾರರು ತಾವೂ ಕ್ರಿಕೆಟ್ ಆಡುತ್ತಿದ್ದ ಸಮಯದಲ್ಲಿ ಇತರ ವರ್ಣದ ಆಟಗಾರರ ವಿರುದ್ಧ ಜನಾಂಗೀಯ ತಾರತಮ್ಯದಲ್ಲಿ ತೊಡಗಿದ್ದರು ಎಂದು ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರ ನಿರ್ಮಾಣ (SJN) ಆಯೋಗವು ಆರೋಪಿಸಿದೆ.
SJN ಆಯೋಗದ ಮುಖ್ಯಸ್ಥ ಡುಮಿಸಾ ಎನ್ತ್ಸೆಬೆಜಾ ಸಲ್ಲಿಸಿದ 235 ಪುಟಗಳ ಅಂತಿಮ ವರದಿಯಲ್ಲಿ CSA ಮ್ಯಾನೇಜ್ಮೆಂಟ್, ಮಾಜಿ ನಾಯಕ ಮತ್ತು ಪ್ರಸ್ತುತ CSA ನಿರ್ದೇಶಕ ಗ್ರೇಮ್ ಸ್ಮಿತ್, ಪ್ರಸ್ತುತ ಮುಖ್ಯ ಕೋಚ್ ಮಾರ್ಕ್ ಬೌಚರ್ ಮತ್ತು ಮಾಜಿ ಬ್ಯಾಟರ್ ಡಿವಿಲಿಯರ್ಸ್ ಕಪ್ಪು ಆಟಗಾರರ ವಿರುದ್ಧ ಅನ್ಯಾಯವಾಗಿ ತಾರತಮ್ಯ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2012ರಲ್ಲಿ ಬೇಲ್ಸ್ ಕಣ್ಣಿಗೆ ಬಿದ್ದು ಮಾರ್ಕ್ ಬೌಷರ್ ದಿಢೀರ್ ನಿವೃತ್ತಿ ಹೊಂದಿದ ನಂತರ ವಿಕೆಟ್ ಕೀಪರ್ ಸ್ಥಾನಕ್ಕೆ ಥಾಮಿ ತ್ಸೊಲೆಕಿಲೆ ಅವರನ್ನು ಆಯ್ಕೆ ಮಾಡಲಿಲ್ಲ. ಸಮಿತಿಯ ನಿರ್ಧಾರವು ವಿಚಾರಹೀನ ಮತ್ತು ವ್ಯವಸ್ಥಿತ ವರ್ಣಭೇದ ನೀತಿಯ ಸ್ಪಷ್ಟ ಲಕ್ಷಣಗಳನ್ನು ತೋರಿಸಿದೆ ಎಂದು ವರದಿ ಹೇಳಿದೆ. ವೆಬ್ಸೈಟ್ ಪ್ರಕಾರ ಸಿಎಸ್ಎ ಮ್ಯಾನೇಜ್ಮೆಂಟ್ ಮತ್ತು ನಾಯಕನ ಗ್ರೇಮ್ ಸ್ಮಿತ್ ಹಾಗೂ ಕೆಲವು ಆಯ್ಕೆಗಾರರು ತ್ಸೊಲೆಕಿಲೆ ಸೇರಿದಂತೆ ಹಲವಾರು ಕಪ್ಪು ವರ್ಣಿಯರು ಅವಕಾಶ ವಂಚಿತರಾಗುವಂತೆ ಮಾಡಿದ್ದಾರೆ ಎಂದು ವಿವರಿಸಿದೆ.
ಇನ್ನು ವಿಶ್ವದಲ್ಲೇ ಎಲ್ಲಿ ಹೋದರೂ ಪ್ರೀತಿಸುವ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ 2015ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ಯುವ ಮಧ್ಯಮ ಕ್ರಮಾಂಕದ ಆಟಗಾರ ಖಾಯಾ ಜೊಂಡೊರನ್ನು ನಡೆಸಿಕೊಂಡ ರೀತಿ ಜನಾಂಗೀಯ ತಾರತಮ್ಯ ತೋರುತ್ತದೆ.
ಮಧ್ಯಮ ಕ್ರಮಾಂಕದ ಬ್ಯಾಟರ್ ಜೆಪಿ ಡುಮಿನಿ ಕೊನೆಯ ಪಂದ್ಯದಲ್ಲಿ ಗಾಯಗೊಂಡಿದ್ದರು. ಆದರೆ, ಅನುಭವಿಯಾಗಿರುವ ಜೊಂಡೋ ಬದಲಿಗೆ ಟೆಸ್ಟ್ ತಂಡದಲ್ಲಿದ್ದ ಡೀನ್ ಎಲ್ಗರ್ ಅವರನ್ನು ಆಡಿಸಲಾಗಿತ್ತು.
ಹಾಡಿದ್ದನ್ನು ಒಪ್ಪಿಕೊಂಡ ಬೌಷರ್
ಇನ್ನು ಮಾರ್ಕ್ ಬೌಷರ್ ತನ್ನ ಸಹ ಕಪ್ಪು ವರ್ಣದ ಆಟಗಾರರನ್ನು ಹಿಯಾಳಿಸುವ ಸಾಂಗ್ಗಳನ್ನು ಇತರ ಬಿಳಿ ಆಟಗಾರರ ಜೊತೆ ಸೇರಿ ಹಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಬೌಷರ್ ಈಗಾಗಲೇ ಸಿಎಸ್ಎಗೆ ತಿಳಿಸಿದ್ದಾರೆ.
ಆರೋಪ ನಿರಾಕರಿಸಿದ ಡಿ ವಿಲಿಯರ್ಸ್
ಇನ್ನೂ ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ್ದ ವಿಶ್ವದಾದ್ಯಂತ ಹೆಚ್ಚು ಮೆಚ್ಚುಗೆ ಪಡೆದಿರುವ ಡಿವಿಲಿಯರ್ಸ್, ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ. "ಕ್ರಿಕೆಟ್‌ನಲ್ಲಿ ಸಮಾನ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು CSA ಯ ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯ(SJN) ಗುರಿಗಳನ್ನು ನಾನು ಬೆಂಬಲಿಸುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಆದರೆ, ನನ್ನ ವೃತ್ತಿ ಜೀವನದಲ್ಲಿ ನಾನು ಪ್ರಮಾಣಿಕ ಕ್ರಿಕೆಟ್ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇನೆ. ನಾನು ತೆಗೆದುಕೊಂಡ ನಿರ್ಧಾರಗಳೆಲ್ಲವೂ ತಂಡಕ್ಕೆ ಉತ್ತಮವಾಗಿದ್ದವು ಎಂದು ನಂಬಿದ್ದೇನೆ. ಆದರೆ ಜಾತಿಯ ಆಧಾರದಲ್ಲಿ ಯಾವುದೇ ನಿರ್ಧಾ ತೆಗೆದುಕೊಂಡಿಲ್ಲ, ಅದೇ ವಾಸ್ತವ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ನೋ ಕಮೆಂಟ್ಸ್, ಬಿಸಿಸಿಐ ಸೂಕ್ತ ರೀತಿಯಲ್ಲಿ ಇದನ್ನು ಡೀಲ್ ಮಾಡಲಿದೆ: ಕೊಹ್ಲಿ ಹೇಳಿಕೆಗೆ ಗಂಗೂಲಿ ಪ್ರತಿಕ್ರಿಯೆ