ಗೀಲಾಂಗ್: ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎ ಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ನೆದರ್ಲೆಂಡ್ಸ್ ಮೂರು ವಿಕೆಟ್‌ಗಳ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆಟಗಾರ ಅಯಾನ್ ಅಫ್ಜಲ್ ಖಾನ್ ಟಿ20 ವಿಶ್ವಕಪ್‌ನಲ್ಲಿ ಪಂದ್ಯ ಆಡಿದ ವಿಶ್ವದ ಅತ್ಯಂತ ಕಿರಿಯ ಕ್ರಿಕೆಟಿಗ ಎನಿಸಿಕೊಂಡರು. ಈ ಮೂಲಕ ಅಯಾನ್ ಪಾಕಿಸ್ತಾನದ ಮೊಹಮ್ಮದ್ ಅಮೀರ್ ಅವರ ದಾಖಲೆ ಮುರಿದಿದ್ದಾರೆ.
ಪಾಕಿಸ್ತಾನದ ಮೊಹಮ್ಮದ್ ಅಮೀರ್ ಅವರು 17 ವರ್ಷ ಮತ್ತು 170 ದಿನಗಳ ವಯಸ್ಸಿನಲ್ಲಿ ತಮ್ಮ ಮೊದಲ ಟಿ20 ವಿಶ್ವಕಪ್ ಪಂದ್ಯ ಆಡಿದ್ದರು. ಇದೀಗ ಯುಎಇಯ ಅಯಾನ್ 16 ವರ್ಷ 335 ದಿನಗಳ ವಯಸ್ಸಿನಲ್ಲಿ ತನ್ನ ಮೊದಲ ಟಿ20 ವಿಶ್ವಕಪ್ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಅಂದರೆ, ಅಮೀರ್ ನಿರ್ಮಿಸಿದ್ದ ದಾಖಲೆಯನ್ನು ಅಯಾನ್ 13 ವರ್ಷಗಳ ಬಳಿಕ ಮುರಿದಿದ್ದಾರೆ. ಇದಲ್ಲದೇ, ಟಿ20 ವಿಶ್ವಕಪ್ ಆಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಶ್ರೇಯಕ್ಕೆ ಅಯಾನ್ ಪಾತ್ರರಾಗಿದ್ದಾರೆ.
ಟಿ20 ವಿಶ್ವಕಪ್ ಆಡಿದ ಅತ್ಯಂತ ಕಿರಿಯ ಆಟಗಾರರು:
- 16 ವರ್ಷ 335 ದಿನಗಳು - 2022, ಅಯಾನ್ ಅಫ್ಜಲ್ ಖಾನ್, ಯುಎಇ
- 17 ವರ್ಷ 55 ದಿನಗಳು - 2009, ಮೊಹಮ್ಮದ್ ಅಮೀರ್, ಪಾಕಿಸ್ತಾನ
- 17 ವರ್ಷ 170 ದಿನಗಳು - 2016, ರಶೀದ್ ಖಾನ್, ಅಫ್ಘಾನಿಸ್ತಾನ
- 17 ವರ್ಷ 196 ದಿನಗಳು - 2009, ಅಹ್ಮದ್ ಶಹಜಾದ್, ಪಾಕಿಸ್ತಾನ
- 17 ವರ್ಷ 282 ದಿನಗಳು - 2010, ಜಾರ್ಜ್ ಡಾಕ್ರೆಲ್, ಐರ್ಲೆಂಡ್
ಅಯಾನ್ ಖಾನ್ ಯಾರು: ಯುಎಇ ಎಡಗೈ ಸ್ಪಿನ್ನರ್ ಅಯಾನ್ ಅಫ್ಜಲ್ ಖಾನ್ ನೆದರ್ಲ್ಯಾಂಡ್ಸ್ ವಿರುದ್ಧ ಟಿ20 ವಿಶ್ವಕಪ್ 2022ರ ಎರಡನೇ ಕ್ವಾಲಿಫೈಯರ್‌ನಲ್ಲಿ ವಿಶ್ವಕಪ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ. 2005ರ ನವೆಂಬರ್ 15ರಂದು ಜನಿಸಿದ ಅಯಾನ್ ಖಾನ್ ಬಲಗೈ ಆಫ್ ಸ್ಪಿನ್ ಬೌಲರ್ ಮತ್ತು ಬ್ಯಾಟರ್ ಆಗಿದ್ದಾರೆ. ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಯುಇಎ ಪರ ಪಾದಾರ್ಪಣೆ ಮಾಡಿ, ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು.
ಆಲ್ರೌಂಡರ್ ಅಯಾನ್ ಬಾಂಗ್ಲಾದೇಶ ವಿರುದ್ಧ ಆಡಿದ 2 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ. ಈ ವೇಳೆ ಅವರು 25 ರನ್ ಕೂಡ ಬಾರಿಸಿದ್ದಾರೆ. ಚೊಚ್ಚಲ ಪಂದ್ಯದಲ್ಲೇ 16 ರನ್ ನೀಡಿ 1 ವಿಕೆಟ್ ಪಡೆದಿದ್ದು, ಬಳಿಕ ಎರಡನೇ ಪಂದ್ಯದಲ್ಲಿ 33 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಯಾನ್ 32 ರನ್ ನೀಡಿ ಯಾವುದೇ ವಿಕೆಟ್ ಗಳಿಸಿರಲಿಲ್ಲ.
ಇದನ್ನೂ ಓದಿ: ತಂಡಕ್ಕೆ ಮರಳಲು ಕಠಿಣ ಶ್ರಮ, ಬದ್ಧತೆ ಬೇಕು.. ವೇಗಿ ಮೊಹಮದ್ ಶಮಿ ಭಾವನಾತ್ಮಕ ಟ್ವೀಟ್