ಮೆಲ್ಬೋರ್ನ್: ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ-20 ವಿಶ್ವಕಪ್ ಆಯೋಜನೆಗೊಂಡಿದೆ. ಈ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆ ಆಸ್ಟ್ರೇಲಿಯಾದ ಕೆಲ ದೈತ್ಯ ಪ್ರತಿಭೆಗಳು ಚುಟುಕು ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕ್ಯಾಪ್ಟನ್ ಆರನ್ ಫಿಂಚ್ ಸುಳಿವು ನೀಡಿದ್ದಾರೆ.
ಟಿ20 ವಿಶ್ವಕಪ್ ಬೆನ್ನಲ್ಲೇ ನಾನು ಹಾಗೂ ಕೆಲ ವಯಸ್ಸಾದ ಆಟಗಾರರು ಟಿ-20 ಕ್ರಿಕೆಟ್ನಿಂದ ನಿವೃತ್ತಿ ಹೊಂದಬಹುದು ಎಂದು ಹೇಳಿಕೆ ನೀಡಿದ್ದಾರೆ. ಟಿ-20 ವಿಶ್ವಕಪ್ನ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಈ ಸಲವೂ ಉತ್ತಮ ಪ್ರದರ್ಶನ ನೀಡುವ ಇರಾದೆ ಇಟ್ಟುಕೊಂಡಿದ್ದು, ತವರು ನೆಲದ ಲಾಭ ಪಡೆದುಕೊಳ್ಳಲು ಮುಂದಾಗಿದೆ.
ಟಿ-20 ವಿಶ್ವಕಪ್ ಮುಕ್ತಾಯಗೊಳ್ಳುತ್ತಿದ್ದಂತೆ ತಾವು ನಿವೃತ್ತಿ ಪಡೆದುಕೊಳ್ಳುವುದಾಗಿ ಈಗಾಗಲೇ ಮ್ಯಾಥ್ಯೂ ವೇಡ್ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ನಾಯಕ ಆರನ್ ಫಿಂಚ್, ಸ್ಟೀವ್ ಸ್ಮಿತ್, ಕಮಿನ್ಸ್ ಸೇರಿದಂತೆ ಇನ್ನೂ ಕೆಲ ಪ್ಲೇಯರ್ಸ್ ವಿದಾಯ ಹೇಳುವ ಸಾಧ್ಯತೆ ಇದೆ. ಟಿ-20 ವಿಶ್ವಕಪ್ ಕಠಿಣ ಸ್ಪರ್ಧೆ. ಕಳೆದ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ಸತತವಾಗಿ ನಾಲ್ಕು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ರೂ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಳ್ಳಲಿಲ್ಲ. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನದ ಜೊತೆಗೆ ಅದೃಷ್ಟ ಸಹ ಕೈಹಿಡಿಯಬೇಕು ಎಂದಿದ್ದಾರೆ.