ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಗುರುವಾರದಿಂದ ಆರಂಭವಾಗಲಿದೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಎರಡು ತಂಡಗಳು ತಲಾ ಒಂದರಲ್ಲಿ ಜಯ ಸಾಧಿಸಿದ್ದು, ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವ ಇರಾದೆಯಲ್ಲಿವೆ.
ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ, 2ನೇ ಪಂದ್ಯದಲ್ಲಿ ಭಾರತ 151 ರನ್ಗಳಿಂದ ಗೆದ್ದು ಬೀಗಿತ್ತು. ಆದರೆ, 3ನೇ ಟೆಸ್ಟ್ನಲ್ಲಿ ತಿರುಗೇಟು ನೀಡಿದ ಆತಿಥೇಯರು ಇನ್ನಿಂಗ್ಸ್ ಮತ್ತು 76 ರನ್ಗಳಿಂದ ಗೆದ್ದು ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿದ್ದರು. ಇದೀಗ ಓವಲ್ನಲ್ಲಿ 4ನೇ ಟೆಸ್ಟ್ ಇಂದಿನಿಂದ ಆರಂಭವಾಗಲಿದ್ದು, ಎಲ್ಲರ ಗಮನ ಓವಲ್ನತ್ತ ತಿರುಗಿದೆ.
ಓವಲ್ನಲ್ಲಿ ಭಾರತಕ್ಕೆ 13 ಟೆಸ್ಟ್ ಪಂದ್ಯಗಳಲ್ಲಿ ಸಿಕ್ಕಿರುವುದು ಒಂದೇ ಜಯ!
ಭಾರತ ಮತ್ತು ಇಂಗ್ಲೆಂಡ್ ಇಲ್ಲಿಯವರೆಗೆ 13 ಟೆಸ್ಟ್ಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಆತಿಥೇಯ ತಂಡ 5ರಲ್ಲಿ ಜಯ ಸಾಧಿಸಿದ್ದರೆ, ಭಾರತ ತಂಡ ಕೇವಲ ಒಂದರಲ್ಲಿ ಜಯ ಸಾಧಿಸಿದೆ. 7 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
1971ರಲ್ಲಿ ಭಾರತಕ್ಕೆ ಜಯ, ಅಲ್ಲಿಂದ ಬರೀ ಸೋಲು!
ಭಾರತ ತಂಡ 1971ರ ಪ್ರವಾಸದಲ್ಲಿ ಕೊನೆಯ ಬಾರಿ ಆಂಗ್ಲರಿಗೆ ಸೋಲುಣಿಸಿತ್ತು. ಅಜಿತ್ ವಾಡೇಕರ್ ನಾಯಕತ್ವದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ 4 ವಿಕೆಟ್ಗಳಿಂದ ಮಣಿಸಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 355 ಮತ್ತು 2ನೇ ಇನಿಂಗ್ಸ್ನಲ್ಲಿ 101 ರನ್ಗಳಿಸಿತ್ತು. ಭಾರತ ಮೊದಲ ಇನ್ನಿಂಗ್ಸ್ನಲ್ಲಿ 284 ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ನೀಡಿದ್ದ 173 ರನ್ಗಳ ಟಾರ್ಗೆಟ್ ಅನ್ನು ಯಶಸ್ವಿಯಾಗಿ ಬೆನ್ನತ್ತಿ ಜಯ ಸಾಧಿಸಿತ್ತು.
ನಂತರ 1982, 1990, 2002, 2007ರಲ್ಲಿ ನಡೆದ ಟೆಸ್ಟ್ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು. ಆದರೆ, 2011ರ ಪ್ರವಾಸದಲ್ಲಿ ಭಾರತ ತಂಡ ಇನ್ನಿಂಗ್ಸ್ ಮತ್ತು 8 ರನ್, 2014ರಲ್ಲಿ ಇನ್ನಿಂಗ್ಸ್ ಮತ್ತು 244 ರನ್ ಹಾಗೂ 2018ರಲ್ಲಿ 118 ರನ್ಗಳ ಸೋಲು ಕಂಡಿದೆ.
ಕಳೆದ ಮೂರು ಪ್ರವಾಸದಲ್ಲಿ ಹೀನಾಯ ಸೋಲು ಕಂಡಿರುವ ಭಾರತ ತಂಡದ ವಿರುದ್ಧ ಈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ, ಭಾರತ ಕಳೆದ 2-3 ವರ್ಷಗಳಿಂದ ವಿದೇಶಗಳಲ್ಲಿ ಅಚ್ಚರಿಯ ಜಯ ಸಾಧಿಸಿದ ದಾಖಲೆ ಹೊಂದಿದೆ. 32 ವರ್ಷಗಳಿಂದ ಗಬ್ಬಾದಲ್ಲಿ ಸೋಲೇ ಕಾಣದಿದ್ದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದಲ್ಲದೇ ಸರಣಿಯನ್ನು ಗೆದ್ದು ತೋರಿಸಿದೆ. ಹಾಗಾಗಿ ಇಂದಿನ ಪಂದ್ಯ ಎರಡು ತಂಡಗಳ ಅಭಿಮಾನಿಗಳಿಗೆ ಹಬ್ಬವನ್ನುಂಟು ಮಾಡಲಿದೆ.
ಇದನ್ನು ಓದಿ:4ನೇ ಟೆಸ್ಟ್: ಹೀನಾಯ ಸೋಲು ಮರೆತು ತಿರುಗಿ ಬೀಳುವ ಉತ್ಸಾಹದಲ್ಲಿ ಭಾರತ, ಅಶ್ವಿನ್ ಆಟ ನಿರೀಕ್ಷೆ