ಕೋಲ್ಕತ್ತಾ: ಮೊದಲ ಪಂದ್ಯದಲ್ಲಿ ಸುಲಭ ಜಯ ಸಾಧಿಸಿರುವ ರೋಹಿತ್ ಬಳಗ ಶುಕ್ರವಾರ ನಡೆಯಲಿರುವ 2ನೇ ಟಿ-20 ಪಂದ್ಯವನ್ನು ಗೆದ್ದು, ಇನ್ನು ಒಂದು ಪಂದ್ಯ ಉಳಿದಿರುವಂತೆ ಸರಣಿಯನ್ನು ವಶಪಡಿಸಿಕೊಳ್ಳುವತ್ತಾ ಗುರಿಯಿಟ್ಟಿದೆ.
ಭಾರತ ಪ್ರವಾಸದಲ್ಲಿ 4 ಸೀಮಿತ ಓವರ್ಗಳ ಪಂದ್ಯವನ್ನಾಡಿರುವ ವೆಸ್ಟ್ ಇಂಡೀಸ್ ಯಾವುದೇ ಪಂದ್ಯದಲ್ಲಿ ಭಾರತಕ್ಕೆ ಪೈಪೋಟಿ ನೀಡುವುದಕ್ಕೆ ವಿಫಲವಾಗಿದೆ. ಏಕದಿನ ಸರಣಿಯನ್ನು 0-3 ರಲ್ಲಿ ಕಳೆದುಕೊಂಡಿದ್ದ ವಿಂಡೀಸ್, ಟಿ-20 ಸರಣಿಯಲ್ಲಾದರೂ ಪೈಪೋಟಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು, ಏಕೆಂದರೆ ಭಾರತ ಪ್ರವಾಸಕ್ಕೂ ಮುನ್ನ ಕೆರಿಬಿಯನ್ ತಂಡ ಇಂಗ್ಲೆಂಡ್ ಎದುರು 3-2ರ ಅಂತರದಲ್ಲಿ ಟಿ-20 ಸರಣಿ ಜಯಿಸಿತ್ತು. ಆದರೆ ಅತಿಥೇಯ ತಂಡದೆದುರು ಪ್ರಬಲ ಸ್ಪರ್ಧೆಯನ್ನುಂಟು ಮಾಡುವುದಕ್ಕೆ ಪೊಲಾರ್ಡ್ ಪಡೆ ವಿಫಲವಾಗಿದೆ.
ನಾಳೆ ನಡೆಯುವ ಪಂದ್ಯವನ್ನು ಗೆದ್ದರೆ ಸೀಮಿತ ಓವರ್ಗಳ ನಾಯಕತ್ವ ವಹಿಸಿಕೊಂಡ ನಂತರ ರೋಹಿತ್ ಶರ್ಮಾ ಸಾಧಿಸಿದ ಸತತ 3ನೇ ಸರಣಿಯಾಗಲಿದೆ. ಮೊದಲು ನ್ಯೂಜಿಲ್ಯಾಂಡ್ ವಿರುದ್ಧ 3-0ಯಲ್ಲಿ ಟಿ20 ಸರಣಿ ಗೆದ್ದರೆ, ವಿಂಡೀಸ್ ವಿರುದ್ಧ 3-0ಯಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.
ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆ: ಪೊಲಾರ್ಡ್ ಪಡೆ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿರುವ ಭಾರತಕ್ಕೆ ಎದುರಾಗಿರುವ ಏಕೈಕ ಸಮಸ್ಯೆ ಎಂದರೆ ವಿರಾಟ್ ಕೊಹ್ಲಿ ಫಾರ್ಮ್. ಅವರು ಕಳೆದ 4 ಇನ್ನಿಂಗ್ಸ್ಗಳಲ್ಲಿ 8, 18, 0 ಮತ್ತು 17 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಆದರೂ ನಾಯಕ ರೋಹಿತ್, ಕೊಹ್ಲಿ ಬೆನ್ನಿಗೆ ನಿಂತಿದ್ದು, ಮಾಜಿ ನಾಯಕ ಆದಷ್ಟು ಬೇಗ ಫಾರ್ಮ್ಗೆ ಮರಳಲಿದ್ದಾರೆ, ಆದರೆ ಮಾಧ್ಯಮದವರೂ ಅವರಿಂದ ದೂರ ಉಳಿದರೆ ಎಲ್ಲವೂ ಸರಿಯಾಗಲಿದೆ ಎಂದಿದ್ದಾರೆ.
ಇನ್ನೂ ಬ್ಯಾಟಿಂಗ್ನಲ್ಲಿ ಮೊದಲ ಪಂದ್ಯದಲ್ಲಿ ತಡವರಿಸಿದ್ದ ಇಶಾನ್ ಕಿಶನ್ಗೆ ಮತ್ತೊಂದು ಅವಕಾಶ ನೀಡಬಹುದು, ಸೂರ್ಯಕುಮಾರ್ ಯಾದವ್ ಮತ್ತು ವೆಂಕಟೇಶ್ ಅಯ್ಯರ್ ತಮಗೆ ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿರುವುದರಿಂದ 2ನೇ ಪಂದ್ಯದಲ್ಲೂ ಮುಂದುವರಿಯಬಹುದು. ಬೌಲಿಂಗ್ನಲ್ಲೂ ಗಾಯಗೊಂಡಿರುವ ದೀಪಕ್ ಚಾಹರ್ 2ನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದ್ದು, ಶಾರ್ದೂಲ್ ಠಾಕೂರ್ ಅಥವಾ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯಬಹುದಾಗಿದೆ.
ಹೋಲ್ಡರ್ ಕಮ್ಬ್ಯಾಕ್: ನೆಟ್ನಲ್ಲಿ ಅಭ್ಯಾಸ ಮಾಡುವಾಗ ಎದೆಗೆ ಚೆಂಡು ಬಡಿದಿದ್ದರಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಆಲ್ರೌಂಡರ್ ಜೇಸನ್ ಹೋಲ್ಡರ್ ತಂಡಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ. ಪೂರನ್, ಪೊಲಾರ್ಡ್ ಉತ್ತಮ ಟಚ್ನಲ್ಲಿದ್ದು, ಹೋಲ್ಡರ್ ಸೇರ್ಪಡೆಯೊಂದಿಗೆ ವಿಂಡೀಸ್ ತಂಡದ ಮಧ್ಯಮ ಕ್ರಮಾಂಕದ ಬಲ ಬಲಿಷ್ಠವಾಗಿರುವುದರಿಂದ ಸರಣಿಯನ್ನು ಉಳಿಸಿಕೊಳ್ಳುವ ಅವಕಾಶವಿದೆ.
ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಕುಲದೀಪ್ ಯಾದವ್ ಮತ್ತು ಹರ್ಪ್ರೀತ್ ಬ್ರಾರ್.
ವೆಸ್ಟ್ ಇಂಡೀಸ್: ಕೀರಾನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಫ್ಯಾಬಿಯನ್ ಅಲೆನ್, ಡರೇನ್ ಬ್ರಾವೋ, ರಾಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕೆಲ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೀಲ್ ಹೊಸೈನ್, ಬ್ರೆಂಡನ್ ಕಿಂಗ್, ರೋವ್ಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಓಡಿಯನ್ ಸ್ಮಿತ್, ಕೈಲ್ ಮೇಯರ್ಸ್, ಹೇಡನ್ ವಾಲ್ಷ್ ಜೂನಿಯರ್.
ಇದನ್ನೂ ಓದಿ:'ಕನಸು ನನಸಾಗಿದೆ..': ಪದಾರ್ಪಣೆ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಆಟವಾಡಿದ ರವಿ ಬಿಷ್ಣೋಯಿ