ರೋಸೋ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ ಭರ್ಜರಿ ಆರಂಭ ಪಡೆದಿದೆ. ಎರಡನೇ ದಿನವಾದ ಇಂದು ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಊಟದ ವೇಳೆಗೆ ವಿಕೆಟ್ ನಷ್ಟವಿಲ್ಲದೇ ಟೀಂ ಇಂಡಿಯಾ 146 ರನ್ ಕಲೆ ಹಾಕಿದೆ. ತಮ್ಮ ಪಾದರ್ಪಣೆ ಪಂದ್ಯದಲ್ಲೇ ಜೈಸ್ವಾಲ್ ಚೊಚ್ಚಲ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.
ಡೊಮಿನಿಕಾದ ರೋಸೋ ವಿಂಡ್ಸರ್ ಪಾರ್ಕ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದಿದ್ದ ವೆಸ್ಟ್ ಇಂಡೀಸ್ ತಂಡವನ್ನು ಭಾರತೀಯ ಬೌಲರ್ಗಳು ಮೊದಲ ದಿನವೇ 150 ರನ್ಗಳಿಗೆ ಕಟ್ಟಿ ಹಾಕಿದ್ದರು. ನಿನ್ನೆಯೇ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 80 ರನ್ ಕಲೆ ಹಾಕಿ ಉತ್ತಮ ಆರಂಭ ಪಡೆದಿತ್ತು. ರೋಹಿತ್ ಶರ್ಮಾ 30 ರನ್ ಹಾಗೂ ಯಶಸ್ವಿ ಜೈಸ್ವಾಲ್ 40 ರನ್ ಬಾರಿಸಿ ಇಂದಿಗೆ ಕ್ರೀಸ್ ಕಾಯ್ದುಕೊಂಡಿದ್ದರು.
ಇದನ್ನೂ ಓದಿ: R Ashwin: ಪಾದಾರ್ಪಣೆ ಪಂದ್ಯದಲ್ಲಿ ತಂದೆ, ಮಗನ ವಿಕೆಟ್ ಪಡೆದು ಅಶ್ವಿನ್ ಅಪರೂಪದ ದಾಖಲೆ
ಎರಡನೇ ದಿನದಾಟ ಆರಂಭಿಸಿದ ರೋಹಿತ್ ಮತ್ತು ಜೈಸ್ವಾಲ್ ಜೋಡಿ ಅದ್ಭುತ ಬ್ಯಾಟಿಂಗ್ ಮುಂದುವರೆಸಿತು. ಊಟದ ವಿರಾಮದ ವೇಳೆ ಇಬ್ಬರು ಬ್ಯಾಟರ್ ಆಕರ್ಷಕ ಅರ್ಧಶತಕಗಳನ್ನು ಬಾರಿಸಿದರು. ಅದರಲ್ಲೂ ಜೈಸ್ವಾಲ್ ಚೊಚ್ಚಲ ಟೆಸ್ಟ್ ಅರ್ಧಶತಕವನ್ನು ಸಿಡಿಸಿ ಮಿಂಚಿದರು. 104 ಎಸೆತಗಳಲ್ಲಿ ಅರ್ಧಶತಕ ಗಡಿಯನ್ನು ಯಶಸ್ವಿಯಾಗಿ ತಲುಪಿದರು. ಅಲ್ಲದೇ, ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ ಭಾರತದ 13ನೇ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಜೈಸ್ವಾಲ್ ಪಾತ್ರರಾದರು.
ಮತ್ತೊಂದೆಡೆ, ರೋಹಿತ್ ಮತ್ತು ಜೈಸ್ವಾಲ್ ಜೋಡಿ ಮೊದಲ ವಿಕೆಟ್ಗೆ 100 ರನ್ಗಳನ್ನು ಪೇರಿಸಿತು. ಇದರ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಸಹ ತಮ್ಮ ಅರ್ಧಶತಕವನ್ನು ಪೂರೈಸಿದರು. ಇದರೊಂದಿಗೆ ರೋಹಿತ್ ಟೆಸ್ಟ್‌ನಲ್ಲಿ 15ನೇ ಅರ್ಧಶತಕವನ್ನು ದಾಖಲಿಸಿದರು. ಊಟದ ವಿರಾಮದ ವೇಳೆಗೆ ಔಟಾಗದೆ ರೋಹಿತ್ ಶರ್ಮಾ 68 ರನ್ ಹಾಗೂ ಯಶಸ್ವಿ ಜೈಸ್ವಾಲ್ 62 ರನ್ ಕಲೆ ಹಾಕಿ ಭದ್ರ ಅಡಿಪಾಯ ಹಾಕಿದರು. ಅಲ್ಲದೇ, ನಾಲ್ಕು ರನ್ಗಳ ಹಿನ್ನಡೆಯನ್ನು ಮಾತ್ರ ಭಾರತ ಹೊಂದುವ ಮೂಲಕ ಇನ್ನಿಂಗ್ಸ್ ಮೇಲೆ ಪ್ರಾಬಲ್ಯ ಸಾಧಿಸಿತ್ತು. ಭಾರತ ಈ ಆರಂಭಿಕ ಜೊತೆಯಾಟವನ್ನು ಮುರಿಯಲು ವೆಸ್ಟ್ ಇಂಡೀಸ್ ಬೌಲರ್ಗಳು ಬೆವರು ಹರಿಸಬೇಕಾಯಿತು.
ಬುಧವಾರ ವೆಸ್ಟ್ ಇಂಡೀಸ್ ಮೇಲೆ ಭಾರತ ಮಾರಕ ಬೌಲಿಂಗ್ ಪ್ರದರ್ಶಿಸಿತ್ತು. ಆರ್. ಅಶ್ವಿನ್ 5 ವಿಕೆಟ್, ರವೀಂದ್ರ ಜಡೇಜಾ 3 ವಿಕೆಟ್, ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದು ಕೆರಿಬಿಯನ್ನರ ಸರ್ವ ಪತನಕ್ಕೆ ಕಾರಣವಾಗಿದ್ದರು.
ಇದನ್ನೂ ಓದಿ: ಭಾರತ vs ವೆಸ್ಟ್ ಇಂಡೀಸ್ ಮೊದಲ ಟೆಸ್ಟ್: ಅಶ್ವಿನ್ 'ಫೈವ್‌ಸ್ಟಾರ್', ನಲುಗಿದ ವಿಂಡೀಸ್