ಹೋವ್(ಇಂಗ್ಲೆಂಡ್): ಟಿ20 ಕ್ರಿಕೆಟ್ನಲ್ಲಿ 2-1 ಅಂತರದಿಂದ ಇಂಗ್ಲೆಂಡ್ ವಿರುದ್ಧ ಸೋಲುಂಡಿರುವ ಟೀಂ ಇಂಡಿಯಾ ವನಿತೆಯರ ತಂಡವು ಏಕದಿನ ಕ್ರಿಕೆಟ್ ಸರಣಿಯಲ್ಲಿ ತಿರುಗೇಟು ನೀಡುತ್ತಿದೆ. ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೌರ್ ನೇತೃತ್ವದ ತಂಡವು 7 ವಿಕೆಟ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಇಂಗ್ಲೆಂಡ್ ಆಟರಾರ್ತಿಯರು ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿದರು. ಈ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಓಪನರ್ ಸ್ಮೃತಿ ಮಂದಾನ (91), ನಾಯಕಿ ಹರ್ಮನ್ಪ್ರೀತ್ ಕೌರ್ ಅಜೇಯ 74 ರನ್ಗಳ ನೆರವಿನಿಂದ 44.2 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದರು.
ಇಂಗ್ಲೆಂಡ್ ತಂಡ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ, ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಇಮಾ (12), ಬ್ಯೂಮಾಂಟ್(7) ಮೊದಲು ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಡಂಕ್ಲಿ(29) ರನ್ಗಳಿಸಿ ತಂಡಕ್ಕೆ ಚೇತರಿಕೆ ನೀಡುವ ನಿರೀಕ್ಷೆ ಹುಟ್ಟಿಸಿದರು. ಆದರೆ, ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ಹರ್ಲಿನ್ ಯಶಸ್ವಿಯಾದರು. ಮಧ್ಯಮ ಕ್ರಮಾಂಕದಲ್ಲಿ ವ್ಯಾಟ್(43) ಹಾಗೂ ರಿಚರ್ಡ್ಸ್ ಅಜೇಯ (50) ರನ್ಗಳಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 227 ರನ್ಗಳಿಸಿದರು.
ಟೀಂ ಇಂಡಿಯಾ ಪರ ದೀಪ್ತಿ ಶರ್ಮಾ 2 ವಿಕೆಟ್ ಪಡೆದರೆ, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ಗಾಯಕ್ವಾಡ್, ಸ್ನೇಹಾ ರಾಣಾ ಹಾಗೂ ಹರ್ಲಿನ್ ತಲಾ 1 ವಿಕೆಟ್ ಕಿತ್ತರು.
ಇದನ್ನೂ ಓದಿ: ಟಿ20 ವಿಶ್ವಕಪ್ಗೆ ಟೀಂ ಇಂಡಿಯಾ ಹೊಸ ಜರ್ಸಿ ಬಿಡುಗಡೆ.. ಆಕಾಶ ನೀಲಿ ಬಣ್ಣದಲ್ಲಿ ಮಿಂಚಿಂಗ್
228 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲೇ ಶೆಫಾಲಿ (1) ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್‌ನಲ್ಲಿ ಒಂದಾದ ಮಂದಾನ- ಭಾಟಿಯಾ ಜೋಡಿ ತಂಡಕ್ಕೆ ಭದ್ರ ಬುನಾದಿ ಹಾಕಿ 98 ರನ್ಗಳ ಜೊತೆಯಾಟವಾಡಿದರು. 50 ರನ್ಗಳಿಸಿದ್ದ ಭಾಟಿಯಾ ವಿಕೆಟ್ ಒಪ್ಪಿಸುವಂತೆ ಬಂದ ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್, ಆರಂಭಿಕ ಆಟಗಾರ್ತಿ ಮಂದಾನ ಜೊತೆ ಸೇರಿ ತಂಡವನ್ನು ಜಯದತ್ತ ಕೊಂಡೊಯ್ದರು.
ಶತಕ ತಪ್ಪಿಸಿಕೊಂಡ ಮಂದಾನ: ಅತ್ಯುತ್ತಮವಾಗಿ ಆಟವಾಡ್ತಿದ್ದ ಸ್ಮೃತಿ ಮಂದಾನ 91ರನ್ಗಳಿಕೆ ಮಾಡಿದ್ದಾಗ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಜೊತೆಗೆ, ಶತಕ ವಂಚಿತರಾದರು. ನಾಯಕಿ ಹರ್ಮನ್ ಪ್ರೀತ್ ಕೌರ್ ಅಜೇಯ 74 ರನ್ಗಳಿಸಿ, ತಂಡಕ್ಕೆ ಗೆಲುವಿನ ಉಡುಗೊರೆ ಕೊಟ್ಟರು. ಕೊನೆಯದಾಗಿ ತಂಡ 44.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 232 ರನ್ಗಳಿಸಿ, ಗೆಲುವಿನ ನಗೆ ಬೀರಿತು. ಇಂಗ್ಲೆಂಡ್ ಪರ ಕ್ರಾಸ್ 2 ವಿಕೆಟ್, ಚಾರ್ಲೆಟ್ 1 ವಿಕೆಟ್ ಕಿತ್ತರು. ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಸ್ಮೃತಿ ಮಂದಾನ ಪಂದ್ಯಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು.