ನವದೆಹಲಿ: ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾದ ಪಿವಿ ಸಿಂಧು ತಮ್ಮ ಮುಂದಿನ ಗುರಿ 2020ರ ಒಲಿಂಪಿಕ್ ಎಂದು ತಿಳಿಸಿದ್ದಾರೆ.
24 ವರ್ಷದ ಪಿವಿ ಸಿಂಧು ಜಪಾನ್ ನಜೋಮಿ ಒಕುಹರ ವಿರುದ್ಧ 21-7,21-7 ರ ಅಂತರದಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿ ದೇಶಕ್ಕೆ ಕೀರ್ತಿ ತಂದಿದ್ದರು. ಚಿನ್ನ ಗೆದ್ದು ಭಾರತಕ್ಕೆ ಆಗಿಮಿಸಿರುವ ಯು ಆಟಗಾರ್ತಿಗೆ ದೆಹಲಿಯಲ್ಲಿ ಭವ್ಯ ಸ್ವಾಗತ ದೊರೆತಿದೆ.
ದೆಹಲಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿರುವ ಸಿಂಧು, ತಮ್ಮ ಸಾಧನೆಗೆ ಕಾರಣವಾದ ಭಾರತ ತಂಡದ ಕೋಚ್ ಗೋಪಿಚಂದ್ ಹಾಗೂ ತಮ್ಮ ವೈಯಕ್ತಿಕ ಕೋಚ್ ಕಿಮ್ ಜಿ ಹುಯ್ನ್ಗೆ ಧನ್ಯವಾದ ತಿಳಿಸಿದರು.
2017 ಹಾಗೂ 2018ರಲ್ಲಿ ಇದೇ ಟೂರ್ನಿಯಲ್ಲಿ ಫೈನಲ್ ತಲುಪಿದರೂ ನನಗೆ ಚಿನ್ನ ಗೆಲ್ಲಲಾಗಿರಲಿಲ್ಲ. ಆದರೆ, ಈ ಬಾರಿ ಚಾಂಪಿಯನ್ ಆಗುವ ಮೂಲಕ ನನ್ನ ಮೇಲಿನ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದೇನೆ ಎಂದು ಒಲಿಂಪಿಕ್ ಬೆಳ್ಳಿಪದಕ ವಿಜೇತೆ ಸಿಂಧು ಸಂತಸ ವ್ಯಕ್ತಪಡಿಸಿದ್ದಾರೆ.
ಒಲಿಂಪಿಕ್ನಲ್ಲಿ ಬೆಳ್ಳಿ ಅಥವಾ ಇದೀಗ ಚಿನ್ನ ಗೆದ್ದಿರುವುದರಲ್ಲಿ ಯಾವುದು ವಿಶೇಷ ಎಂದು ಕೇಳಿದ್ದಕ್ಕೆ, ಸಿಂದು ಹಲವಾರು ಜನರು ನನಗೆ ಇದನ್ನೇ ಕೇಳುತ್ತಾರೆ ಎಂದು ನನಗೆ ತಿಳಿದಿದೆ. ಆದರೆ, ಎಲ್ಲ ಟೂರ್ನಮೆಂಟ್ಗಳು ಬೇರೆ ಬೇರೆ ರೀತಿಯ ಅನುಭವವಾಗುತ್ತದೆ. ಎರಡು ನನಗೆ ವಿಶೇಷ ಎಂದು ತಿಳಿಸಿದರು.
ಇನ್ನು ನಿಮ್ಮ ಮುಂದಿನ ಗುರಿ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಹಲವಾರು ಸೂಪರ್ ಸೀರಿಸ್ ಟೂರ್ನಮೆಂಟ್ಗಳು ನನ್ನ ಮುಂದಿವೆ. ಹಂತ ಹಂತವಾಗಿ ಮುಂದುವರಿಯುತ್ತೇನೆ. ಟೋಕಿಯೋ ಒಲಿಂಪಿಕ್ ನನ್ನ ಅಂತಿಮ ಗುರಿ ಎಂದು ಹೇಳಿದ್ದಾರೆ.