ಹೈದರಾಬಾದ್: ಭಾರತದ ಸ್ಟಾರ್ ಶಟ್ಲರ್ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಅವರಿಗೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ.
ಕಳೆದ ವಾರ 'ಅರ್ಜುನ ಅವಾರ್ಡ್' ಪಡೆದಿದ್ದ ಸಾತ್ವಿಕ್ ಕೋವಿಡ್ ಸೋಂಕು ಬಾಧಿಸಿರುವುದರಿಂದ ಶನಿವಾರ ನಡೆಯುವ ವರ್ಚುವಲ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

'ಕೆಲವು ದಿನಗಳ ಹಿಂದೆ ನಾನು ಆ್ಯಂಟಿಜೆನ್ ಪರೀಕ್ಷೆಗೆ ಒಳಗಾದ ನಂತರ ಕಳೆದ ಐದು ದಿನಗಳಿಂದ ಕ್ವಾರಂಟೈನ್ನಲ್ಲಿದ್ದೆ. ಮತ್ತೆ ಆರ್ಟಿ-ಪಿಸಿಆರ್ ಪರೀಕ್ಷೆಯೂ ನಡೆಯಿತು. ಆ ಪರೀಕ್ಷೆಯಲ್ಲಿ ಪಾಸಿಟಿವ್ ಇರುವುದು ಖಚಿತವಾಗಿದೆ' ಎಂದು ಅಮಲಪುರಂನಲ್ಲಿರುವ ತಮ್ಮ ಮನೆಯಿಂದಲೇ ಅವರು ಮಾಧ್ಯಮಕ್ಕೆ ವಿಚಾರ ತಿಳಿಸಿದ್ದಾರೆ.
'ನಾನು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಸದ್ಯಕ್ಕೆ ಯಾವುದೇ ಲಕ್ಷಣಗಳಿಲ್ಲ. ಪೋಷಕರು ಅಥವಾ ನನ್ನ ಸ್ನೇಹಿತರಲ್ಲಿ ಯಾರೂ ವೈರಸ್ ಸೋಂಕಿತರಿರಲಿಲ್ಲ. ಆದರೆ ಯಾರಿಂದ, ಹೇಗೆ ಸೋಂಕು ತಗುಲಿದೆ ಎಂದು ಗೊತ್ತಾಗುತ್ತಿಲ್ಲ' ಎಂದು ಹೇಳಿದ್ದಾರೆ.
ಮನೆಯಲ್ಲೇ ಕ್ವಾರಂಟೈನ್ಲ್ಲಿರುವ ಸಾತ್ವಿಕ್ ಇನ್ನು ಮೂರು ದಿನಗಳಲ್ಲಿ ಮತ್ತೊಂದು ಟೆಸ್ಟ್ಗೆ ಒಳಗಾಗಲಿದ್ದಾರೆ.
ಸಹ ಆಟಗಾರ ಚಿರಾಗ್ ಶೆಟ್ಟಿ ಜೊತೆಗೂಡಿ 2018ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ, ಕಳೆದ ವರ್ಷ ಥಾಯ್ಲೆಂಡ್ ಓಪನ್ ಸೂಪರ್ 500 ಚಾಂಪಿಯನ್ ಆಗಿದ್ದರು. ಇವರಿಬ್ಬರನ್ನು ಜಂಟಿಯಾಗಿ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು.