ನವದೆಹಲಿ: ವಿಶ್ವದ ಮಾಜಿ ನಂಬರ್ 1 ಶಟ್ಲರ್ ಸೈನಾ ನೆಹ್ವಾಲ್ ವೃತ್ತಿ ಜೀವನದಲ್ಲೇ ಅತ್ಯಂತ ಕಠಿಣ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರು ಹೆಚ್ಚಿನ ಪಂದ್ಯಗಳಲ್ಲಿ ಸೋಲುಗಳನ್ನು ತಪ್ಪಿಸಿ, ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಮಾಜಿ ರಾಷ್ಟ್ರೀಯ ಚಾಂಪಿಯನ್ ಹಾಗೂ ಕೋಚ್ ಯು.ವಿಮಲ್ ಕುಮಾರ್ ಹೇಳಿದ್ದಾರೆ.
ಒಲಿಂಪಿಕ್ ಕಂಚು ಪದಕ ವಿಜೇತ ಆಟಗಾರ್ತಿಯಾಗಿರುವ ಸೈನಾ ನೆಹ್ವಾಲ್ ಪ್ರಸ್ತುತ 20ನೇ ಶ್ರೇಯಾಂಕದಲ್ಲಿದ್ದಾರೆ. ಅವರು ಪ್ರಸ್ತುತ ನಡೆಯುತ್ತಿರುವ 2ನೇ ಥಾಯ್ಲೆಂಡ್ ಓಪನ್ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಅಲ್ಲದೆ ಮೊದಲ ಥಾಯ್ಲೆಂಡ್ ಓಪನ್ನಲ್ಲಿ 2ನೇ ಸುತ್ತಿನಲ್ಲಿ ಸೋಲು ಕಂಡಿದ್ದರು. 2020ರ ಮಾರ್ಚ್ ನಂತರ ತಾವು ಪಾಲ್ಗೊಂಡ ಮೊದಲ ಟೂರ್ನಮೆಂಟ್ನಲ್ಲಿ ಅವರು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ.
"ಸೈನಾ ನೆಹ್ವಾಲ್ ಥಾಯ್ಲೆಂಡ್ ಓಪನ್ನಲ್ಲಿ ತಮ್ಮ ಶೇಪ್ ಕಳೆದುಕೊಂಡಿದ್ದಾರೆ. ಮತ್ತೆ ಬೌನ್ಸ್ ಬ್ಯಾಕ್ ಆಗಲು ಅವರಿಗೆ ಅಷ್ಟು ಸುಲಭವಲ್ಲ. ಅವರಿಗೆ ನೋವು ಇಲ್ಲದಿದ್ದರೆ ಅತ್ಯುತ್ತಮವಾಗಿ ಆಡುತ್ತಾರೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಆದರೆ ಪ್ರಸ್ತುತ ಅವರನ್ನು ನೋಡಿದರೆ ನನಗೆ ಅವರು ಫಿಟ್ ಆಗಿ ಕಾಣುತ್ತಿಲ್ಲ. ಬಹುಶಃ ಕೋವಿಡ್-19 ಸಾಂಕ್ರಾಮಿಕಕ್ಕೆ ಒಳಗಾಗಿದ್ದ ಅವರು ಇನ್ನೂ ಚೇತರಿಸಿಕೊಳ್ಳುತ್ತಿರಬಹುದು ಎಂದು ನನ್ನ ಅಭಿಪ್ರಾಯವಾಗಿದೆ" ಎಂದು ಕುಮಾರ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ 2 ಬಾರಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿರುವ ಕುಮಾರ್, ಸೈನಾ ಪ್ರದರ್ಶನ ನೋಡಿದರೆ ಅವರ ವೃತ್ತಿ ಜೀವನದಲ್ಲೇ ಅತ್ಯಂತ ಕಠಿಣ ಹಾದಿಯಲ್ಲಿದ್ದಾರೆ ಅನ್ನಿಸುತ್ತಿದೆ ಎಂದಿದ್ದಾರೆ.
"ಕಳೆದ ಒಂದೆರಡು ವರ್ಷಗಳು ಸೈನಾ ಪಾಲಿಗೆ ಉತ್ತಮವಾಗಿಲ್ಲ ಎಂದು ನನಗನ್ನಿಸುತ್ತಿದೆ. ಅವರು ತಮ್ಮ ಸೋಲುಗಳನ್ನು ಆದಷ್ಟು ಕಡಿಮೆ ಮಾಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಅವರು ಕೊನೆಯ ಬಾರಿ 2019ರ ಇಂಡೋನೇಷ್ಯಾ ಓಪನ್ನಲ್ಲಿ ಉತ್ತಮ ಫಲಿತಾಂಶ ಕಂಡಿದ್ದಾರೆ. ಅಲ್ಲಿಂದ ಅವರ ವೃತ್ತಿ ಜೀವನ ಕ್ಷೀಣಿಸುತ್ತಿದೆ. ಇದರಿಂದ ಹೊರಬರಲು ಉತ್ತಮ ವರ್ಕೌಟ್, ದೈಹಿಕ ತರಬೇತಿ, ಇತರೆ ವಿಷಯಗಳಲ್ಲಿ ಅವರು ಉತ್ತಮ ಯೋಜನೆಗಳನ್ನು ಮಾಡಿಕೊಳ್ಳಬೇಕು. ಅವರು ಮತ್ತೆ ಉತ್ತಮ ಪ್ರದರ್ಶನ ತೋರಲು ಇದೇ ಉತ್ತಮ ಮಾರ್ಗ" ಎಂದು ಕುಮಾರ್ ತಿಳಿಸಿದ್ದಾರೆ.
ಈ ರೀತಿ ಹೆಚ್ಚು ಪಂದ್ಯಗಳನ್ನು ಸೋಲುವುದರಿಂದ ಅದು ಅವರ ಆತ್ಮವಿಶ್ವಾಸವನ್ನು ಕುಂದಿಸುತ್ತದೆ. ಆಟ ಆಡುವ ಸಂರ್ಭದಲ್ಲಿ ಕೇವಲ ದೈಹಿತ ಮಾತ್ರವಲ್ಲ ಮಾನಸಿಕವಾಗಿಯೂ ಪ್ರಬಲವಾಗಿರಬೇಕು. ನನ್ನ ಪ್ರಕಾರ ಈ ಸೋಲುಗಳು ಅವರ ಮೇಲೆ ಪರಿಣಾಮ ಬೀರಬಹುದು. ಆದಷ್ಟು ಬೇಗ ಉತ್ತಮ ಫಲಿತಾಂಶಗಳನ್ನು ಪಡೆದು ಒಲಿಂಪಿಕ್ಸ್ಗೆ ಸಕಾರಾತ್ಮಕವಾಗಿ ಸಿದ್ಧರಾಗಬೇಕೆಂದು ಅವರು ಹೇಳಿದ್ದಾರೆ.
ಇದನ್ನು ಓದಿ:ಥಾಯ್ಲೆಂಡ್ ಓಪನ್ : ಸೆಮಿಫೈನಲ್ಗೆ ಅಂತ್ಯವಾದ ಸಾತ್ವಿಕ್-ಚಿರಾಗ್ ಅದ್ಭುತ ಆಟ