ಹೈದರಾಬಾದ್: ಪಿ.ವಿ.ಸಿಂಧು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಷಿಪ್ನಲ್ಲಿ ಸ್ವರ್ಣ ಗೆದ್ದು ಐತಿಹಾಸಿಕ ಸಾಧನೆ ಮಾಡುವ ಮೂಲಕ ಅವರ ತಾಯಿಯ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ್ದಾರೆ. ಈ ಗೆಲುವು ನಮಗೆ ಡಬಲ್ ಧಮಾಕ ಎಂದು ಪೋಷಕರು ಖುಷಿಪಟ್ಟಿದ್ದಾರೆ.
ಇಂದು ನನ್ನ ಹುಟ್ಟುಹಬ್ಬ. ಸಿಂಧು ಕೂಡ ಇಂದೇ ಚಿನ್ನ ಗೆದ್ದಿರುವುದು ತುಂಬಾ ವಿಶೇಷ. ಇದು ಜೀವನದ ಅದ್ಭುತ ಕ್ಷಣಗಳಲ್ಲಿ ಒಂದು. ಈ ದಿನ ಮತ್ತು ಹುಟ್ಟುಹಬ್ಬವನ್ನು ಎಂದೂ ಮರೆಯಲಾರೆ ಎಂದು ಸಿಂಧು ತಾಯಿ ಪಿ.ವಿಜಯಾ ಸಂತಸ ವ್ಯಕ್ತಪಡಿಸಿದ್ದಾರೆ.
ಜಪಾನ್ ಆಟಗಾರ್ತಿ ನೊಜೊಮಿ ಒಕುಹರ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆಯೇ ಸಿಂಧು ಪೋಷಕರು ಸಿಹಿ ಹಂಚಿ ಸಂಭ್ರಮಿಸಿದರು. ಫೈನಲ್ ಹಣಾಹಣಿಯಲ್ಲಿ 38 ನಿಮಿಷಗಳಲ್ಲಿ ಸಿಂಧು ಗೆಲುವಿನ ದಡ ಸೇರಿದರು. ಈ ಮೂಲಕ ಚಿನ್ನ ಗೆಲ್ಲುವ ಕನಸನ್ನೂ ಕೈಗೂಡಿಸಿಕೊಂಡರು.