ಬಾಲಿ(ಇಂಡೋನೇಷಿಯಾ): 2021ರಲ್ಲಿ ಭಾರಿ ವೈಫಲ್ಯ ಅನುಭವಿಸಿದ್ದ ಭಾರತದ ಶಟ್ಲರ್ ಪ್ರಣಯ್ ಇಂಡೋನೇಷಿಯಾ ಮಾಸ್ಟರ್ಸ್ನಲ್ಲಿ (Indonesia Masters) ವಿಶ್ವದ 2ನೇ ಶ್ರೇಯಾಂಕದ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ರೋಚಕ ಜಯ ಸಾಧಿಸಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.
2020ರ ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್ (Olympic champ Axelsen) ಆಗಿರುವ ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ 14-21,21-19, 21-16ರ ಅಂತರದಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್ನಲ್ಲಿ 21-14ರಲ್ಲಿ ಸುಲಭವಾಗಿ ಚಾಂಪಿಯನ್ ಆಟಗಾರನಿಗೆ ಶರಣಾದ ಪ್ರಣಯ್, ನಂತರದ ಎರಡು ಗೇಮ್ಗಳಲ್ಲಿ ಅದ್ಭುತ ಪ್ರದರ್ಶನ ತೋರಿ ಪಂದ್ಯವನ್ನು ಗೆದ್ದುಕೊಂಡರು.
ಕಳೆದ ಒಂದು ವರ್ಷದಲ್ಲಿ ಆಡಿದ ಬಹುತೇಕ ಟೂರ್ನಿಗಳಲ್ಲಿ ಹೀನಾಯ ಪ್ರದರ್ಶನ ತೋರಿ 32ನೇ ಶ್ರೇಯಾಂಕಕ್ಕೆ ಕುಸಿದಿದ್ದ ಭಾರತೀಯ ಶಟ್ಲರ್ ಇಂದಿನ ಪ್ರದರ್ಶನ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಲ್ಲದೆ ಹಿಂದಿನ 5 ಮುಖಾಮುಖಿಯಲ್ಲಿ ಪ್ರಣಯ್ ಡ್ಯಾನೀಸ್ ಶಟ್ಲರ್ ವಿರುದ್ಧ ಸೋಲು ಕಂಡಿದ್ದರು.
ಪ್ರಣಯ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಕಿಡಂಬಿ ಶ್ರೀಕಾಂತ್ ವಿರುದ್ಧ ಹೋರಾಡಲಿದ್ದಾರೆ. ಶ್ರೀಕಾಂತ್ ಹಿಂದಿನ 5 ಮುಖಾಮುಖಿಯಲ್ಲಿ ಪ್ರಣಯ್ ವಿರುದ್ಧ 4-1ರಲ್ಲಿ ಗೆಲುವಿನ ಅಂತರ ಕಾಯ್ದುಕೊಂಡಿದ್ದಾರೆ.
ಶ್ರೀಕಾಂತ್ ಇಂದಿನ ಪಂದ್ಯದಲ್ಲಿ ಟೂರ್ನಿಯ 6ನೇ ಶ್ರೇಯಾಂಕದ ಜೊನಾಥನ್ ಕ್ರಿಸ್ಟೀ ವಿರುದ್ಧ 13-21, 21-18, 21-15ರಲ್ಲಿ ಗೆಲುವು ಸಾಧಿಸಿದರು.
8ರ ಘಟ್ಟಕ್ಕೆ ಪಿ.ವಿ.ಸಿಂಧು:
ಹಾಲಿ ವಿಶ್ವಚಾಂಪಿಯನ್ ಪಿ.ವಿ.ಸಿಂಧು (World champion P.V.Sindhu) ಕೂಡ 2ನೇ ಸುತ್ತಿನ ಪಂದ್ಯದಲ್ಲಿ ವಿಶ್ವದ 47ನೇ ಶ್ರೇಯಾಂಕದ ಸ್ಪೇನ್ನ ಕ್ಲಾರಾ ಅಹುರ್ಮೆಂದಿ ವಿರುದ್ಧ ಪ್ರಯಾಸದ ಗೆಲುವು ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಒಲಿಂಪಿಕ್ಸ್ ಮೆಡಲಿಸ್ಟ್ ಸಿಂಧು 17-21, 21-7, 21-12ರಲ್ಲಿ ಗೆಲುವು ಸಾಧಿಸಿದರು.
ಆದರೆ ಪುರುಷರ 2ನೇ ಸುತ್ತಿನ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಯುವ ಶಟ್ಲರ್ ಲಕ್ಷ್ಯ ಸೇನ್ ವಿಶ್ವದ ನಂಬರ್ ಒನ್ ಆಟಗಾರ ಜಪಾನ್ನ ಕೆಂಟೊ ಮೊಮೊಟೊ ವಿರುದ್ಧ 13-21, 19-21ರಲ್ಲಿ ಸೋಲು ಕಂಡರು. ಆದರೆ ಮೊದಲ ಸುತ್ತಿನಲ್ಲಿ ಸ್ಥಳೀಯ 10ನೇ ಶ್ರೇಯಾಂಕದ ಶಟ್ಲರ್ ಕಾಂತಾ ತ್ಸುನೇಯಮಾರನ್ನು ಮಣಿಸಿದ್ದರು.
ಇದನ್ನೂ ಓದಿ: ಧೋನಿಯನ್ನು ಕಾಣಲು 1,436 ಕಿ.ಮೀ. ನಡೆದುಕೊಂಡೇ ಸಾಗಿ ಬಂದ ಅಭಿಮಾನಿ!