ಹೈದರಾಬಾದ್: ಭಾರತದ ಮಂಚೂಣಿ ಬ್ಯಾಡ್ಮಿಂಟನ್ ಪಟು ಪಿವಿ ಸಿಂಧು ಜನವರಿಗೆ ಮುಂದೂಡಲ್ಪಟ್ಟಿರುವ ವರ್ಲ್ಡ್ ಟೂರ್ ಫೈನಲ್ಗೆ ನೇರ ಅರ್ಹತೆ ಪಡೆಯುವುದರಿಂದ ವಂಚಿತರಾಗಿದ್ದಾರೆ.
ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ನಿಯಮಗಳ ಪ್ರಕಾರ ವಿಶ್ವಚಾಂಪಿಯನ್ಗಳು ವರ್ಲ್ಡ್ ಟೂರ್ ಫೈನಲ್ಗೆ ನೇರ ಅರ್ಹತೆ ಪಡೆಯುತ್ತಿದ್ದರು. ಆದರೆ, ಕೋವಿಡ್ 19 ಸಾಂಕ್ರಾಮಿಕ ರೋಗವು ಅಂತಾರಾಷ್ಟ್ರೀಯ ಕ್ಯಾಲೆಂಡರ್ಗೆ ಅಡ್ಡಿ ಪಡಿಸಿದೆ. ಹಾಗಾಗಿ ಬೋರ್ಡ್ ಕೆಲವು ಮಾನದಂಡಗಳನ್ನು ಬದಲಾಯಿಸಲು ನಿರ್ಧರಿಸಿದೆ. ವರ್ಲ್ಡ್ ಟೂರ್ ಫೈನಲ್ 2021ರ ಜನವರಿ 27-31 ರಿಂದ ಆರಂಭವಾಗಲಿದೆ.
ಬ್ಯಾಂಕಾಕ್ (ಥಾಯ್ಲೆಂಡ್) ನಲ್ಲಿ ನಡೆಯುವ ಎಚ್ಎಸ್ಬಿಸಿ ಬಿಡಬ್ಲ್ಯುಎಫ್ 'ವರ್ಲ್ಡ್ ಟೂರ್ ಫೈನಲ್ಸ್ 2020'ಗೆ ಪ್ರಸ್ತುತ ನಿಯಮಗಳ ಪ್ರಕಾರ ಆಟಗಾರರು ಅರ್ಹತೆ ಪಡೆಯುತ್ತಾರೆ. ಇದಕ್ಕೆ ಹೊರತಾಗಿ ಪ್ರಸ್ತುತ ವಿಶ್ವದ ಯಾವುದೇ ಚಾಂಪಿಯನ್ಗಳು ನೇರ ಅರ್ಹತೆ ಪಡೆಯುವುದಿಲ್ಲ. ಮತ್ತು ವಿಶ್ವ ಪ್ರವಾಸಗಳಿಂದ ಗಳಿಸಿದ ಅಂಕಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಬಿಡಬ್ಲ್ಯೂಎಫ್ ಭಾನುವಾರ ಪ್ರಕಟಣೆ ತಿಳಿಸಿದೆ.
ಕಳೆದ ವರ್ಷ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಸಿಂಧು, ಇದೇ ತಿಂಗಳಿನಿಂದ ಆರಂಭವಾಗುವ ಡೆನ್ಮಾರ್ಕ್ ಓಪನ್ನಿಂದ ಹೊರಗುಳಿದಿದ್ದಾರೆ. ಆದ್ದರಿಂದ ವಿಶ್ವ ಟೂರ್ ಫೈನಲ್ಗೆ ಪ್ರವೇಶಿಸಲು ಏಷ್ಯಾದ ಟೂರ್ನಮೆಂಟ್ಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ.
ಡೆನ್ಮಾರ್ಕ್ ಓಪನ್ನಿಂದ ಹೊರಬರುವ ನಿರ್ಧಾರಕ್ಕೆ ನಾವು ವಿಷಾಧಿಸುವುದಿಲ್ಲ. ಏಷ್ಯಾದ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿ ಸಿಂದು ವಿಶ್ವ ಟೂರ್ ಫೈನಲ್ಗೆ ಅರ್ಹತೆ ಪಡೆಯಲಿದ್ದಾರೆ ಎಂದು ಸಿಂಧು ತಂದೆ ಪಿ.ವಿ. ರಮಣ ಹೇಳಿದ್ದಾರೆ.
ಸಿಂಧು ವಿಶ್ವ ಚಾಂಪಿಯನ್ ಮತ್ತು ಈ ಹಿಂದೆ ವಿಶ್ವ ಟೂರ್ ಫೈನಲ್ನಲ್ಲಿ ಗೆಲುವು ಸಾಧಿಸಿದ್ದರು. ಆದ್ದರಿಂದ ನಮ್ಮ ಮುಖ್ಯ ಗುರಿ ಆಲ್ ಇಂಗ್ಲೆಂಡ್ ಓಪನ್ ಮತ್ತು ಒಲಿಂಪಿಕ್ಸ್ ಎಂದಿದ್ದಾರೆ.