ನವದೆಹಲಿ : ಭಾರತದ ಸ್ಟಾರ್ ಶಟ್ಲರ್ ಕಿಡಂಬಿ ಶ್ರೀಕಾಂತ್ ಭಾನುವಾರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಬೆಳ್ಳಿ ಪದಕ ಗೆದ್ದಿರುವುದು ಭಾರತೀಯ ಬ್ಯಾಡ್ಮಿಂಟನ್ನ ಐತಿಹಾಸಿಕ ಕ್ಷಣ ಎಂದು ಮಾಜಿ ಬ್ಯಾಡ್ಮಿಂಟನ್ ಆಟಗಾರ ದಿನೇಶ್ ಖನ್ನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ಸಿಂಗಾಪುರ್ನ ಲೋ ಕೀನ್ ಯಿವ್ ವಿರುದ್ಧ 15-21, 20-22ರ ಅಂತರದಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿದರು. ಆದರೆ, ಬ್ಯಾಡ್ಮಿಂಟ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಇದೇ ಮೊದಲ ಬಾರಿಗೆ ಬೆಳ್ಳಿಪದಕ ಗೆದ್ದ ಪುರುಷ ಶಟ್ಲರ್ ಎಂಬ ಖ್ಯಾತಿಗೆ ಒಳಗಾದರು.
ಭಾರತ ದೃಷ್ಠಿಕೋನ ಮತ್ತು ಶ್ರೀಕಾಂತ್ ದೃಷ್ಠಿಕೋನದಲ್ಲಿ ಇದು ಬೇಸರದ ಸಂಗತಿ. ಆದರೆ, ಅವರು ಬೆಳ್ಳಿ ಗೆದ್ದಿರುವ ಅವರ ಪ್ರದರ್ಶನ ಭಾರತೀಯ ಬ್ಯಾಡ್ಮಿಂಟನ್ಗೆ ಐತಿಹಾಸಿಕ ಕ್ಷಣ. ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದ ಲೋ ಕೀನ್ ಯಿವ್ ವಿರುದ್ಧ ಕಣಕ್ಕಿಳಿದಿದ್ದರು.
ಅವರು ಟೂರ್ನಮೆಂಟ್ನಲ್ಲಿ ಉತ್ತಮ ಶ್ರೇಯಾಂಕದ ಆಟಗಾರರಿಗೆ ಸೋಲುಣಿಸಿದ್ದರು. ಒಂದು ಹಂತದಲ್ಲಿ ಶ್ರೀಕಾಂತ್ 13-11ಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ, ಯಿವ್ ಉತ್ತಮವಾಗಿ ಕಮ್ಬ್ಯಾಕ್ ಮಾಡಿದರೆಂದು ದಿನೇಶ್ ಖನ್ನ ಹೇಳಿದ್ದಾರೆ.
ಆದರೂ ಇದು ನಮಗೆ ಶ್ರೇಷ್ಠ ಟೂರ್ನಮೆಂಟ್, ನಮ್ಮ ಆಟಗಾರರು ಎರಡು ಪದಕಗಳನ್ನು ಪಡೆದಿದ್ದಾರೆ. ಮೊದಲು ಪ್ರಕಾಶ್ ಪಡುಕೋಣೆ 1983ರಲ್ಲಿ ನಂತರ ಸಾಯಿ ಪ್ರಣೀತ್ 2019ರಲ್ಲಿ ಈ ಟೂರ್ನಮೆಂಟ್ನಲ್ಲಿ ಪದಕ ಪಡೆದಿದ್ದರು. ಲಕ್ಷ್ಯ ಸೇನ್ರ ಕಂಚಿನ ಪದಕ ಮತ್ತು ಶ್ರೀಕಾಂತ್ರ ಬೆಳ್ಳಿ ಪದಕ ಅದ್ಭುತ ಪ್ರದರ್ಶನ ಎಂದು ದಿನೇಶ್ ಎಎನ್ಐಗೆ ಹೇಳಿದರು.
ಲಕ್ಷ್ಯ ಕೂಡ ತಮ್ಮ ಮೊದಲ ಟೂರ್ನೆಮೆಂಟ್ನಲ್ಲೇ ಉತ್ತಮವಾಗಿ ಆಡಿದರು. ಅವರು ತಮಗಿಂತ ಮೇಲಿನ ಶ್ರೇಯಾಂಕದ ಆಟಗಾರರಿಗೆ ಸೋಲುಣಿಸಿದ್ದಾರೆ. ಸೆಮಿಫೈನಲ್ನಲ್ಲೂ ಶ್ರೀಕಾಂತ್ ವಿರುದ್ಧವೂ ತುಂಬಾ ಪೈಪೋಟಿ ನೀಡಿದ್ದರು. ಭವಿಷ್ಯದಲ್ಲಿ ಆತನಿಂದ ಮತ್ತಷ್ಟ ಅತ್ಯುನ್ನತ ಪ್ರದರ್ಶನಗಳನ್ನು ನಿರೀಕ್ಷಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಇತಿಹಾಸ ಬರೆದ ಕಿಡಂಬಿ ಶ್ರೀಕಾಂತ್ : ವಿಶ್ವಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಪುರುಷ ಶಟ್ಲರ್