ಜಕಾರ್ತ(ಇಂಡೋನೇಷ್ಯಾ): ಹಾಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಭಾರತದ ಪಿ.ವಿ.ಸಿಂಧು ಇಂಡೋನೇಷ್ಯಾ ಮಾಸ್ಟರ್ಸ್ ಚಾಂಪಿಯನ್ಶಿಪ್ನಲ್ಲಿ ಜಪಾನ್ ಆಟಗಾರ್ತಿಯನ್ನು ಮಣಿಸಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.
ವಿಶ್ವದ 6ನೇ ಶ್ರೇಯಾಂಕದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲೂ ಜಪಾನ್ನ ಆಯಾ ಒಹೊರಿ ವಿರುದ್ಧ 14-21, 21-15, 21-11 ರಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದ್ದಾರೆ.
ದೇಶದ ಚಾಂಪಿಯನ್ ಆಟಗಾರ್ತಿ ಮೊದಲ ಸುತ್ತಿನಲ್ಲಿ ಎಡವಿದರೂ ಎರಡು ಮತ್ತು ಮೂರನೇ ಸುತ್ತಿನಲ್ಲಿ ಭರ್ಜರಿ ತಿರುಗೇಟು ನೀಡಿ 50 ನಿಮಿಷಗಳ ಕಾದಾಟದಲ್ಲಿ ಗೆಲುವಿನ ನಗೆ ಬೀರಿದರು.
ಇತ್ತೀಚೆಗೆ ಮುಗಿದ ಮಲೇಷ್ಯಾ ಮಾಸ್ಟರ್ಸ್ನಲ್ಲಿ ಸಿಂಧು ಹಾಲಿ 2ನೇ ಶ್ರೇಯಾಂಕದ ಆಟಗಾರ್ತಿ ಚೀನಾದ ತಾಯ್ ತ್ಜು ಯಿಂಗ್ ವಿರುದ್ಧ ಸೋಲನುಭವಿಸಿದ್ದರು. ಇದೀಗ ಮತ್ತೆ ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದ್ದು ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್ನ ಸಯಾಕಾ ತಕಹಶಿ ವಿರುದ್ಧ ಕಾದಾಡಲಿದ್ದಾರೆ.
ತಕಹಶಿ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ 19- 21, 21-13, 21-5 ರಲ್ಲಿ ಸೈನಾ ನೆಹ್ವಾಲ್ರನ್ನು ಮಣಿಸಿ ದ್ವಿತೀಯ ಸುತ್ತು ಪ್ರವೇಶಿಸಿದ್ದರು.